
ಬೆಂಗಳೂರು: ಅಲಹಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರೊಬ್ಬರು ಸಬ್ ಇನ್‍ಸ್ಪೆಕ್ಟರ್ ಗುಂಡಿಗೆ ಬಲಿಯಾದ ಹಿನ್ನೆಲೆಯಲ್ಲಿ ಕಲಾಪದಿಂದ ದೂರ ಉಳಿಯುವಂತೆ ಬೆಂಗಳೂರು ವಕೀಲರ ಸಂಘ ನೀಡಿದ್ದ ಕರೆ ಯಶಸ್ವಿಯಾಗಿದೆ.
ಘಟನೆ ಖಂಡಿಸಿ ದೇಶದಾದ್ಯಂತ ವಕೀಲರು ಕಲಾಪದಿಂದ ದೂರ ಉಳಿಯುವಂತೆ ಅಖಿಲ ಭಾರತ ವಕೀಲರ ಪರಿಷತ್ ಕೂಡ ಕರೆ ನೀಡಿತ್ತು. ಇದಕ್ಕೆ ರಾಜ್ಯ ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘ ಕೈಜೋಡಿಸಿದ್ದವು. ಎಂದಿನಂತೆ ಹೈಕೋರ್ಟ್‍ನಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾದ ಕಲಾಪ ಅರ್ಧ ತಾಸಿನಲ್ಲಿ ಮುಕ್ತಾಯಗೊಂಡಿತು.
ಹೈಕೋರ್ಟ್‍ನ ಎಲ್ಲ ನ್ಯಾಯಪೀಠಗಳು ಕಲಾಪ ಆರಂಭಿಸಿದರೂ, ವಕೀಲರು ವಿಚಾರಣೆಗೆ ಹಾಜರಾಗದೆ ಹೊರಗುಳಿದರು. ಬೆರಳಣಿಕೆಯಷ್ಟು ಪೀಠಗಳು ಮಾತ್ರ ಮಧ್ಯಾಹ್ನದವರೆಗೂ ಕಾರ್ಯನಿರ್ವಹಿಸಿದವು. ತುರ್ತು ಪ್ರಕರಣಗಳ ವಿಚಾರಣೆ ನಡೆಸಿ ನಂತರ ಕಲಾಪ ಸ್ಥಗಿತಗೊಳಿಸಿದವು. ಸದಾ ವಕೀಲರು ಹಾಗೂ ಕಕ್ಷಿದಾರರಿಂದ ಕಿಕ್ಕಿರಿದು ಇರುತ್ತಿದ್ದ ಹೈಕೋರ್ಟ್ ಆವರಣ ಸೋಮವಾರ ವಕೀಲರೆಲ್ಲರೂ ಕಲಾಪದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಭಣಗುಡುತ್ತಿತ್ತು.
ರಾಜ್ಯದ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ, ಮುನ್ಸಿಫ್ ನ್ಯಾಯಾಲಯ, ಸಿಟಿ ಸಿವಿಲ್ ಕೋರ್ಟ್ ಹಾಗೂ ಮೇಯೋ ಹಾಲ್ ಕೋರ್ಟ್ ಗಳಲ್ಲೂ ವಕೀಲರು ಕಲಾಪದಿಂದ ದೂರ ಉಳಿದು ಶಾಂತಿಯುತವಾಗಿ ಪ್ರತಿಭಟಿಸಿದರು.
Advertisement