ಪ್ರಧಾನಿ, ಗೃಹ ಸಚಿವರೇ ಸಿಬಿಐ ತನಿಖೆಗೆ ಕ್ರಮ ಕೈಗೊಳ್ಳಿ

ರಾಜ್ಯ ಸರ್ಕಾರದ ನಡೆ ನೋಡಿದರೆ ವಸ್ತುನಿಷ್ಠ ತನಿಖೆಯಾಗುವ ಭರವಸೆಯಿಲ್ಲ. ಪ್ರಧಾನಿ ಹಾಗೂ ಗೃಹ ಸಚಿವರೇ, ನೀವು ಮಧ್ಯಪ್ರವೇಶಿಸಿ ಸಿಬಿಐ ತನಿಖೆಗೆ ಕ್ರಮ ಕೈಗೊಳ್ಳಿ' ಸಿಬಿಐ ತನಿಖೆಗೆ ಆಗ್ರಹಿಸಿ ನಡೆಯುತ್ತಿರುವ ಅಭಿಯಾನದಲ್ಲಿ ಲಕ್ಷಾಂತರ ಜನ ಮಾಡಿರುವ ಆಗ್ರಹವಿದು...
ಡಿ.ಕೆ. ರವಿ
ಡಿ.ಕೆ. ರವಿ

`ರಾಜ್ಯ ಸರ್ಕಾರದ ನಡೆ ನೋಡಿದರೆ ವಸ್ತುನಿಷ್ಠ ತನಿಖೆಯಾಗುವ ಭರವಸೆಯಿಲ್ಲ. ಪ್ರಧಾನಿ ಹಾಗೂ ಗೃಹ ಸಚಿವರೇ, ನೀವು ಮಧ್ಯಪ್ರವೇಶಿಸಿ ಸಿಬಿಐ ತನಿಖೆಗೆ ಕ್ರಮ ಕೈಗೊಳ್ಳಿ' ಸಿಬಿಐ ತನಿಖೆಗೆ ಆಗ್ರಹಿಸಿ ನಡೆಯುತ್ತಿರುವ ಅಭಿಯಾನದಲ್ಲಿ ಲಕ್ಷಾಂತರ ಜನ ಮಾಡಿರುವ ಆಗ್ರಹವಿದು.

ಲಕ್ಷಾಂತರ ಜನ ಎಂದು ಬೇಕಾಬಿಟ್ಟಿಯಾಗಿ ಹೇಳುತ್ತಿಲ್ಲ. ಆನ್‍ಲೈನ್ ಸಹಿ ಮೂಲಕ 1.30 ಲಕ್ಷಕ್ಕೂ ಅಧಿಕ ಜನ ರಾಜ್ಯ ಸರ್ಕಾರದ ಕಣ್ಣು ತೆರೆಸುವ ಕೆಲಸಕ್ಕೆ ಮುಂದಾಗಿದ್ದಾರೆ. ಚೇಂಜ್ ಡಾಟ್ ಆರ್ಗ್ ಎಂಬ ಆನ್‍ಲೈನ್ ವೇದಿಕೆ ಮೂಲಕ ಉತ್ತಿಷ್ಠ ಭಾರತ ಎಂಬ ಸಂಸ್ಥೆಯು ಈ ಬೃಹತ್ ಅಭಿಯಾನ ಆರಂಭಿಸಿದೆ. ವಿಶೇಷವೆಂದರೆ ಸಾರ್ವಜನಿಕರ ಈ ಪ್ರಯತ್ನಕ್ಕೆ ಮೂವರು ಐಎಎಸ್ ಅಧಿಕಾರಿಗಳು ಬೆಂಬಲ ಸೂಚಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಆರಂಭವಾದ ಅಭಿಯಾನದಲ್ಲಿ ಬುಧವಾರ ರಾತ್ರಿಯೊಳಗೆ 1.30 ಲಕ್ಷ ಜನ ಅಧಿಕೃತವಾಗಿ ಸಹಿ ಮಾಡಿ ಸಿಬಿಐ ತನಿಖೆಗೆ ತಮ್ಮ ವಾದ ಮಂಡಿಸಿದ್ದಾರೆ. ರಾಜ್ಯ ಸರ್ಕಾರ ಯಾವ ಕಾರಣಕ್ಕೆ ಸಿಬಿಐ ತನಿಖೆ ನಡೆಸಬೇಕು ಎಂದು ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದಲ್ಲಿ ಮೊಂಡುತನ ಪ್ರದರ್ಶಿಸುತ್ತಿರುವವರು ಒಮ್ಮೆ ಸಾರ್ವಜನಿಕರು ವ್ಯಕ್ತಪಡಿಸಿರುವವಾದ ಗಮನಿಸಿದರೆ ಸಿಬಿಐ ತನಿಖೆಯ ವಾದ ಮಂಡನೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗುತ್ತದೆ.

ಉತ್ತಿಷ್ಠ ವಾದವೇನು?

ಪ್ರಾಮಾಣಿಕ ಹಾಗೂ ದಕ್ಷ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಡಿ.ಕೆ. ರವಿ ಅವರು ಮರಳು ಹಾಗೂ ಭೂ ಮಾಫಿಯಾದ ವಿರುದ್ಧ ತಿರುಗಿಬಿದ್ದಿದ್ದರು. ಸಾಮಾನ್ಯ ವ್ಯಕ್ತಿಯಂತೆ ಬದುಕಿದ್ದ ರವಿ, ಜಾತಿ ಭೇದವಿಲ್ಲದೇ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಕೋಲಾರ ಜನರ ವಿರೋಧದ ನಡುವೆ ಅವರನ್ನು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿತ್ತು. ಕೋಲಾರ ಹಾಗೂ ರಾಜ್ಯಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ.

4 ತಿಂಗಳ ಅವಧಿಯಲ್ಲಿ ರು.129 ಕೋಟಿ ತೆರಿಗೆಯನ್ನು ಅವರು ಸಂಗ್ರಹಿಸಿದ್ದರು. ಮಂತ್ರಿ, ಡಿಎಸ್ ಮ್ಯಾಕ್ಸ್, ಕಾನ್ಭಿಡೆಂಟ್, ರಾಜೇಶ್ ಜ್ಯುವೆಲ್ಸ್ ಸೇರಿದಂತೆ ಸಾಕಷ್ಟು ಪ್ರಭಾವಿ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು. ಆದರೆ ಮಾ.16ರಂದು ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಂತು. ಈ ಸಾವಿನ ಹಿಂದೆ ಕಾಣದ ಕೈಗಳಿರುವ ಶಂಕೆ ವ್ಯಕ್ತವಾಗಿದೆ. ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಚೇಂಜ್ ಡಾಟ್ ಆರ್ಗ್‍ನಲ್ಲಿ ಉತ್ತಿಷ್ಠ ಭಾರತ ವಾದಿಸಿದೆ.

ನೀವೂ ಸಹಿ ಹಾಕಬಹುದು

ಚೇಂಜ್ ಡಾಟ್ ಆರ್ಗ್(change.org)ಗೆ ಭೇಟಿ ನೀಡಿ ಡಿ.ಕೆ. ರವಿ ಅವರಿಗೆ ಸಂಬಂಝಿಸಿದ ಸುದ್ದಿ ಮೇಲೆ ಕ್ಲಿಕ್ ಮಾಡಿ ಟ್ವಿಟರ್ ಅಥವಾ ಫೇಸ್‍ಬುಕ್ ಮೂಲಕ ನಿಮ್ಮ ಸಹಿ ಹಾಕಬಹುದಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಹೆಸರು ಹಾಗೂ ಮಿಂಚಂಚೆ ದಾಖಲಿಸುವುದು ಕಡ್ಡಾಯ. ಅಂದಹಾಗೆ ಚೇಂಜ್ ಡಾಟ್ ಆರ್ಗ್‍ನಲ್ಲಿ 2.51 ಲಕ್ಷ ಸಹಿ ಸಂಗ್ರಹಣೆಯಾಗಿರುವುದು ದಾಖಲೆಯಾಗಿದೆ. ರವಿ ಅವರು ಗಳಿಸಿರುವ ಜನಪ್ರಿಯತೆ ಕಾರಣದಿಂದ ಕೇವಲ ಒಂದೇ ದಿನದಲ್ಲಿ ಸಹಿ ಮಾಡಿದವರ ಸಂಖ್ಯೆ ಒಂದು ಲಕ್ಷ ದಾಟಿದೆ.

ಐಎಎಸ್ಅಧಿಕಾರಿಗಳ ಬೆಂಬಲ
ಸಿಬಿಐ ತನಿಖೆ ನಡೆಸಬೇಕೆಂಬ ಸಾರ್ವಜನಿಕರ ಕೂಗಿಗೆ ರಾಜ್ಯದ ಕೆಲ ಪ್ರಾಮಾಣಿಕ ಹಾಗೂ ಹಿರಿಯ ಅಧಿಕಾರಿಗಳೂ ಧ್ವನಿಗೂಡಿಸಿದ್ದಾರೆ. `ರವಿ ಅವರ ಸಾವು ನಮ್ಮ ಧೃತಿಗೆಡಿಸಿದೆ. ಇಂತಹ ಪ್ರಾಮಾಣಿಕ ಅಧಿಕಾರಿಯ ಸಾವನ್ನು ನಂಬಲಾಗುತ್ತಿಲ್ಲ. ರಾಜ್ಯ ಸರ್ಕಾರದ ತನಿಖಾ ದಳದ ಬಗ್ಗೆ ನಂಬಿಕೆಯಿಲ್ಲ ಎಂದಲ್ಲ. ಆದರೆ ಲಕ್ಷಾಂತರ ಸಾರ್ವಜನಿಕರು ಹೇಳುತ್ತಿರುವಂತೆ ನಾನೂ ಒಬ್ಬ ಸಾಮಾನ್ಯ ಪ್ರಜೆಯಾಗಿ ಸಿಬಿಐ ತನಿಖೆಗೆ ಚೇಂಜ್ ಡಾಟ್ ಆರ್ಗ್ ಮೂಲಕ ಒತ್ತಾಯಿಸಿದ್ದೇನೆ' ಎಂದು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಮೋಹನ್ ತಿಳಿಸಿದ್ದಾರೆ. ಇದೇ ರೀತಿ ಹಿರಿಯ ಐಎಎಸ್ ಅಧಿಕಾರಿಗಳಾದ ಪಂಕಜ್‍ಕುಮಾರ್ ಪಾಂಡೆ ಹಾಗೂ ರಶ್ಮಿ ಮಹೇಶ್ ಕೂಡ ಚೇಂಜ್ ಡಾಟ್ ಆರ್ಗ್‍ನಲ್ಲಿ ಸಹಿ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com