ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆ ವಿರುದ್ಧ ಗೂಂಡಾ ಕಾಯ್ದೆ

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ನಿರಂತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಹಿಳೆಯೊಬ್ಬರ ವಿರುದ್ಧ ನಗರ ಪೊಲೀಸರು ಗೂಂಡಾ ಕಾಯ್ದೆ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ...
ಗೂಂಡಾ ಕಾಯ್ದೆ ಅನ್ವಯ ಬಂಧಿತಳಾದ ಮಹಿಳೆ ಫರಿದಾ
ಗೂಂಡಾ ಕಾಯ್ದೆ ಅನ್ವಯ ಬಂಧಿತಳಾದ ಮಹಿಳೆ ಫರಿದಾ

ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ನಿರಂತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಹಿಳೆಯೊಬ್ಬರ ವಿರುದ್ಧ ನಗರ ಪೊಲೀಸರು ಗೂಂಡಾ ಕಾಯ್ದೆ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

ಯಶವಂತಪುರದ ಷರೀಫ್ ನಗರ ನಿವಾಸಿ ಫರಿದಾ(55) ಗೂಂಡಾ ಕಾಯ್ದೆ  ಅನ್ವಯ ಬಂಧಿತಳಾದ ಮಹಿಳೆ. ಮಕ್ಕಳಾದ ಮುಬಾರಕ್ ಹಾಗೂ ಜಮ್ ಶೆಡ್ ಜತೆ ಸೇರಿಕೊಂಡು ನಗರದಲ್ಲಿ ಕಳೆದ 15 ವರ್ಷಗಳಿಂದ ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ಮಾರಾಟದಲ್ಲಿ ಫರಿದಾ ತೊಡಗಿದ್ದಳು. ನಗರದ ಪ್ರಮುಖ ಕಾಲೇಜುಗಳು, ಮಾಲ್‍ಗಳು, ಚಿತ್ರಮಂದಿರಗಳು, ರೈಲ್ವೆ ನಿಲ್ದಾಣ ಮುಂತಾದ ಪ್ರದೇಶಗಳಲ್ಲಿ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದಳು.

ಈ ಮೂಲಕ ಯುವಕರ ದಾರಿ ತಪ್ಪಿಸಿ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಾ ಸಮಾಜ ವಿರೋಧ ಚಟುವಟಿಕೆಗಳಲ್ಲಿ ತೊಡಗಿದ್ದಳು. ಈಕೆಯ ವಿರುದ್ಧ 2004ರಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುಗಳು ಹಾಗೂ ಮತ್ತು ಬರಿಸುವ ವಸ್ತುಗಳ ನಿಯಂತ್ರಣ ಕಾಯ್ದೆ (ಎನ್‍ಡಿಪಿಎಸ್) ಅನ್ವ ಯ 10 ಪ್ರಕರಣಗಳು ದಾಖಲಾಗಿದ್ದವು. ಪ್ರತಿ ಬಾರಿ ಬಂಧನಕ್ಕೆ ಒಳಗಾಗುತ್ತಿದ್ದ ಫರಿದಾ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗೆ ಬಂದು ಮತ್ತೆ ಅದೇ ದಂಧೆಯಲ್ಲಿ ತೊಡಗುತ್ತಿದ್ದಳು.ಈ ಹಿನ್ನೆಲೆಯಲ್ಲಿ ಈಕೆಯ ಕೃತ್ಯಗಳ ಮೇಲೆ ನಿಯಂತ್ರಣ ಇರಿಸಲು ಗೂಂಡಾ ಕಾಯ್ದೆ  ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದರು.

ಪ್ರತಿ ಬಾರಿ ಬಂಧಿಸಿ ಪ್ರಕರಣ ದಾಖಲಿಸಿದ ನಂತರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ನ್ಯಾಯಾಲಯದ ವಿಚಾರಣೆ ವೇಳೆ ಸಾಕ್ಷಿಗಳು ಈಕೆಯ ವಿರುದ್ಧ ಸಾಕ್ಷ ಹೇಳಲು ಬರುತ್ತಿರಲಿಲ್ಲ. ಅಲ್ಲದೇ, ಎಷ್ಟೋ ಪ್ರಕರಣಗಳಲ್ಲಿ ಸಾಕ್ಷ್ಯಿಗಳನ್ನೇ ತನ್ನ ಪರವಾಗಿಸಿಕೊಳ್ಳುತ್ತಿದ್ದಳು. ಈ ಹಿನ್ನೆಲೆಯಲ್ಲಿ ಯಾವೊಂದು ಪ್ರಕರಣದಲ್ಲಿ
ಫರಿದಾಗೆ ಜೈಲು ಶಿಕ್ಷೆಯಾಗಿಲ್ಲ. ಹೀಗಾಗಿ, ಆಕೆಯ ಮೇಲೆ ನಿಯಂತ್ರಣ ಹೇರಲು ಗೂಂಡಾ ಕಾಯ್ದೆ ಹೇರಿ ಜೈಲಿಗಟ್ಟಲಾಗಿದೆ ಎಂದು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com