ಸಾಧನೆಯ ಶಿಖರವೇರಿದ್ದ ಹೊನ್ನಪ್ಪ ಭಾಗವತರ್

ಕನ್ನಡ ಚಿತ್ರರಂಗದಲ್ಲಿ ಉತ್ತಮ ಸೌಕರ್ಯ ಇಲ್ಲದಿದ್ದಾಗಲೂ ಈ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿ ಸಾಧನೆಯ ಉತ್ತುಂಗಕ್ಕೆ ಏರಿದ ಖ್ಯಾತಿ ದಿ. ಸಿ. ಹೊನ್ನಪ್ಪ ಭಾಗವತರ್ ಅವರದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ...
ಸಿ. ಹೊನ್ನಪ್ಪ ಭಾಗವತರ್
ಸಿ. ಹೊನ್ನಪ್ಪ ಭಾಗವತರ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಉತ್ತಮ ಸೌಕರ್ಯ ಇಲ್ಲದಿದ್ದಾಗಲೂ ಈ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿ ಸಾಧನೆಯ ಉತ್ತುಂಗಕ್ಕೆ ಏರಿದ ಖ್ಯಾತಿ ದಿ. ಸಿ. ಹೊನ್ನಪ್ಪ ಭಾಗವತರ್ ಅವರದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಇಲ್ಲಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಿ. ಹೊನ್ನಪ್ಪ ಭಾಗವತರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರಂಗಭೂಮಿಯಿಂದ ತಮ್ಮ ವೃತ್ತಿಜೀವನ ಆರಂಭಿಸಿದ ಭಾಗವತರ್ ಅವರು ಚಲನಚಿತ್ರರಂಗದಲ್ಲೂ ಸೈ ಎನಿಸಿಕೊಂಡವರು. ಚಿತ್ರನಿರ್ಮಾಣ, ಗಾಯನ, ನಿರ್ದೇಶನ, ಛಾಯಾಗ್ರಹಣ, ನಟನೆ ಸೇರಿದಂತೆ ಹಲವಾರು ವಿಭಾಗದಲ್ಲಿ ಪರಿಣಿತಿಯನ್ನು ಪಡೆದಿದ್ದ ಅವರು ಒಬ್ಬ ಪರಿಪೂರ್ಣ ಕಲಾವಿದರಾಗಿದ್ದರು' ಎಂದು ಶ್ಲಾಘಿಸಿದರು.

1941ರ ಹೊತ್ತಿನಲ್ಲೇ ಪ್ರಖ್ಯಾತಿ ಪಡೆಯುವುದು ಎಂದರೆ ಸಾಮಾನ್ಯದ ಮಾತಲ್ಲ. ಆಗ ಚಿತ್ರರಂಗದಲ್ಲಿ ಮೂಲ ಸೌಕರ್ಯಗಳೇ ಇರಲಿಲ್ಲ. ಎಲ್ಲ ಸೌಕರ್ಯ ಹೊಂದಿ ಸಾಧನೆ ಮಾಡುವುದಕ್ಕಿಂತ ಏನೂ ಇಲ್ಲದೇ ಸಾಧನೆ ಮಾಡಿರುವುದೇ ಹೆಗ್ಗಳಿಕೆ. ಅಲ್ಲದೇ ಆಗಿನ ಕಾಲದಲ್ಲೇ ತಮಿಳು ಚಿತ್ರರಂಗ ದಲ್ಲೂ ನಟಿಸಿ ಜನಮೆಚ್ಚುಗೆಗಳಿಸಿದ್ದರು. ಹೀಗೆ ಹೆಗ್ಗಳಿಕೆ ಗಳಿಸಿದ ಮೊದಲ ನಟ ಇವರಾಗಿದ್ದರು. ಇದೀಗ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಅವರ ಕುಟುಂಬ ಸಹ ನಡೆಯುತ್ತಿರುವುದು ಆದರ್ಶದ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಎಂಎಲ್‍ಸಿ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, `ನನ್ನ ಕುಟುಂಬಕ್ಕೂ ಹೊನ್ನಪ್ಪ ಅವರಿಗೂ ಅವಿನಾಭಾವ ಸಂಬಂಧ. ನಮ್ಮ ಊರಾದ ತುರುವೇಕೆರೆಗೆ ಅವರು ಭೇಟಿ ನೀಡಿದಾಗಲೆಲ್ಲ ನಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ನಾಟಕ ಪ್ರದರ್ಶನಕ್ಕೆ ಅವರು ನಮ್ಮೂರಿಗೆ ಬಂದಾಗ ಒಮ್ಮೆ ನನಗೆ ಸಿದ್ದನ ಪಾತ್ರ ನೀಡಿ, ನಾಟಕದಲ್ಲಿ ನಟಿಸುವಂತೆ ಮಾಡಿದ್ದರು. ಮತ್ತೊಮ್ಮೆ ಅರ್ಜುನನ ಪಾತ್ರ ನೀಡಿದ್ದರು' ಎಂದು ಸ್ಮರಿಸಿದರು.

ಉಪನ್ಯಾಸಕ ಎ.ವಿ. ಸೂರ್ಯನಾರಾಯಣಸ್ವಾಮಿ ಮಾತನಾಡಿ, `ಹೊನ್ನಪ್ಪ ಭಾಗವತರ್ ಅವರು ತಮಿಳಿನಲ್ಲಿ 18, ಕನ್ನಡದಲ್ಲಿ 8 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಸೂಕ್ಷ್ಮ ಸ್ವಭಾವದ ವ್ಯಕ್ತಿಯಾಗಿದ್ದರು. ಕಷ್ಟದಲ್ಲಿದ್ದ ಕಲಾವಿದರಿಗೆ ಸಾಕಷ್ಟು ಸಹಾಯವನ್ನೂ ಮಾಡಿದ್ದರು. ಅವರ ಸಂಗೀತ ಕಚೇರಿ ಅಂದರೆ 50 ಸಾವಿರದಿಂದ ಲಕ್ಷ ಮಂದಿ ಸೇರುತ್ತಿದ್ದರು. ಅಷ್ಟರ ಮಟ್ಟಿಗೆ ಅವರ ಜನಪ್ರಿಯತೆ ಇತ್ತು' ಎಂದು ಹೇಳಿದರು. ಹಿರಿಯ ನಟ ಶಿವರಾಂ, ಹಿರಿಯ ನಿರ್ದೇಶಕ ಸಿ.ವಿ. ಶಿವಶಂಕರ್, ಸಂಗೀತ ತಜ್ಞ, ವಿಮರ್ಶಕ ಪ್ರೊ. ವಿ. ಸುಬ್ರಹ್ಮಣ್ಯ ಮೈಸೂರು, ರಂಗಗೀತೆ ಕಲಾವಿದ ಪರಮಶಿವನ್, ಸಾಹಿತಿ ದೊಡ್ಡರಂಗೇಗೌಡ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com