ಸಂಗೀತ, ದೃಶ್ಯದಲ್ಲಿ ಅದ್ಭುತ ಶಕ್ತಿ

ಪದಗಳಿಲ್ಲದೆ, ಸಂಭಾಷಣೆ ಇಲ್ಲದೆ ನೋಡುವ ಕಣ್ಣಂಚಿನಲ್ಲಿ ನೀರು ತರಿಸುವ ಅದ್ಭುತ ಶಕ್ತಿ ಸಂಗೀತ ಮತ್ತು ದೃಶ್ಯಕ್ಕೆ ಮಾತ್ರವಿದೆ. ಅಂಥ ಶಕ್ತಿಯ ಮೂಲಕ `ಗ್ರ್ಯಾಮ್ಮಿ ಪ್ರಶಸ್ತಿ'ಗೆ ಪಾತ್ರವಾದ ಯುವ ಸಂಗೀತ...
ಸಂಗೀತ ನಿರ್ದೇಶಕ ರಿಖಿ ಕೇಜ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ
ಸಂಗೀತ ನಿರ್ದೇಶಕ ರಿಖಿ ಕೇಜ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ

ಬೆಂಗಳೂರು: ಪದಗಳಿಲ್ಲದೆ, ಸಂಭಾಷಣೆ ಇಲ್ಲದೆ ನೋಡುವ ಕಣ್ಣಂಚಿನಲ್ಲಿ ನೀರು ತರಿಸುವ ಅದ್ಭುತ ಶಕ್ತಿ ಸಂಗೀತ ಮತ್ತು ದೃಶ್ಯಕ್ಕೆ ಮಾತ್ರವಿದೆ. ಅಂಥ ಶಕ್ತಿಯ ಮೂಲಕ `ಗ್ರ್ಯಾಮ್ಮಿ ಪ್ರಶಸ್ತಿ'ಗೆ ಪಾತ್ರವಾದ ಯುವ ಸಂಗೀತ ನಿರ್ದೇಶಕ ರಿಖಿ ಕೇಜ್ ಅವರದ್ದು ಬಹುದೊಡ್ಡ ಸಾಧನೆ ಎಂದು ನ್ಯಾ. ಎ.ಜೆ. ಸದಾಶಿವ ಬಣ್ಣಿಸಿದರು.

ಸಾಹಿತಿ ಮತ್ತು ಕಲಾವಿದರ ವೇದಿಕೆ, ಬೆಂಗಳೂರು ಗಾಯನ ಸಮಾಜ, ಧ್ವನಿ ಸುಗಮ ಸಂಗೀತ ಕೇಂದ್ರ, ವಿಜಯನಗರ ಬಿಂಬ ಹಾಗೂ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಸೇರಿದಂತೆ ನಾನಾ ಸಂಸ್ಥೆಗಳು ಭಾನುವಾರ ನಗರದಲ್ಲಿ ಸಂಗೀತ ನಿರ್ದೇಶಕ ರಿಖಿ ಕೇಜ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಗೀತ ಅತ್ಯಂತ ಪ್ರಭಾವ ಶಾಲಿ ಮಾಧ್ಯಮ. ಅದೊಂದು ತಪ್ಪಸ್ಸು. ವೃತ್ತಿಯಲ್ಲಿ ವೈದ್ಯರಾದರೂ, ಅದನ್ನು ತಪಸ್ಸಿನ ಮೂಲಕವೇ ತಮ್ಮದಾಗಿಸಿಕೊಂಡ ರಿಖಿ ಕೇಜ್, ಇಷ್ಟು ಚಿಕ್ಕ ವಯಸ್ಸಿಗೆ ಗ್ರಾಮ್ಮಿ ಪ್ರಶಸ್ತಿ ಪಡೆದಿದ್ದು ಕನ್ನಡಿಗರ ಹೆಮ್ಮೆ. ಆ ಮಟ್ಟಿಗೆ ಅವರು ವೈದ್ಯರಾಗದೆ, ಸಂಗೀತವನ್ನೆ ತಮ್ಮ ಸಾಧನೆಯ ಪ್ರಮುಖ ಕ್ಷೇತ್ರವಾಗಿಸಿಕೊಂಡಿದ್ದು ಕನ್ನಡದ ಸೌಭಾಗ್ಯ ಎಂದರು.

ರಿಖಿ ಕೇಜ್ ಕುರಿತು ಅಭಿನಂದನಾ ಭಾಷಣ ಮಾಡಿದ ಹಿರಿಯ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ `ವಿಂಡ್ಸ್ ಆಫ್ ಸಂಸಾರ' ಆಲ್ಬಂನ ಸಾಹಸಗಾಥೆಯನ್ನು ಮುಕ್ತ ಕಂಠದಿಂದ ಬಣ್ಣಿಸಿದರು. ರಿಖಿ ಕೇಜ್ ಸಂಗೀತ ನಿರ್ದೇಶಕ ಮಾತ್ರವಲ್ಲ, ಕವಿಯೂ ಹೌದು. ನೀರಿನ ತಾಳಕ್ಕೆ, ಆಗಸದ ಓಟಕ್ಕೆ ನಿಸರ್ಗದ ಲಯವನ್ನು ಬೆಸುಗೆಹಾಕಿ ಸಂಗೀತದ ಸ್ವರ ಜೋಡಿಸಿರುವುದು ಅದ್ಭುತವಾಗಿದೆ ಎಂದು ಮೆಚ್ಚುಗೆಯ ಮಾತುಗಳ ನ್ನಾಡಿದರು. ರಂಗಕರ್ಮಿ ಹಾಗೂ ಸಾಹಿತಿ ಗಿರೀಶ್ ಕಾರ್ನಾಡ್ ಮಾತನಾಡಿ, `ಭಾರತೀಯ ಸಂಗೀತ ಹಿಂದಿಗಿಂತ ಈಗ ಹೆಚ್ಚು ಶ್ರೀಮಂತವಾಗಿದೆ. ಈ ಕಾಲಘಟ್ಟದಲ್ಲಿ ನಾವಿದ್ದೇವೆ ಎನ್ನುವುದೇ ಹೆಮ್ಮೆ. ರಿಖಿ ಅವರಂಥ ತರುಣ ತಲೆ ಮಾರಿನವರು ಸಂಗೀತದಲ್ಲಿ ದೊಡ್ಡ ಸಾಧನೆ ಮಾಡು ತ್ತಿದ್ದಾರೆ.

1960ರಿಂದೀಚೆಗೆ ಭಾರತೀಯ ಸಂಗೀತವನ್ನು  ಅನೇಕರು ಶ್ರೀಮಂತಗೊಳಿಸಿದ್ದಾರೆ' ಎಂದರು. ಡಾ. ಸುಮಾ ಸುಧೀಂದ್ರ, ಗಾಯಕಿ ಎಂ.ಡಿ. ಪಲ್ಲವಿ ಕೂಡ ರಿಖಿ ಸಾಧನೆಗೆ ನುಡಿ ಗೌರವ ಸಲ್ಲಿಸಿದರು. ಶ್ರೀನಿವಾಸ ಜಿ.ಕಪ್ಪಣ್ಣ ಕಾರ್ಯಕ್ರಮದ ಔಚಿತ್ಯ ವಿವರಿಸಿದರು. ಹಿರಿಯ ನಟಿ ಬಿ. ಜಯಶ್ರೀ, ಶಿವಮೊಗ್ಗ ಸುಬ್ಬಣ್ಣ, ವೈ.ಕೆ.ಮುದ್ದು ಕೃಷ್ಣ, ವರ್ಷಕೇಜ್ ಹಾಜರಿದ್ದರು. ಅಭಿನಂದನೆಗೆ ಪಾತ್ರವಾದ ರಿಖಿ ತಮ್ಮ ಅನಿಸಿಕೆ ಹಂಚಿಕೊಂಡರು. ಇದೇ ವೇಳೆ ವಿಂಡ್ಸ್ ಆಫ್ ಸಂಸಾರ' ಆಲ್ಬಂನ ವೀಡಿಯೋ ಪ್ರದರ್ಶಿಸಲಾಯಿತು.

ಅಧಿಕಾರಿ ರವಿ ನಿಧನಕ್ಕೆ ರಿಖಿ ಕೇಜ್ ಗೀತ ನಮನ
ಸಂಗೀತ ನಿರ್ದೇಶಕ ರಿಖಿ ಕೇಜ್ ಅವರು ದಕ್ಷ ಅಧಿಕಾರಿ ಡಿ.ಕೆ.ರವಿ ನಿಧನಕ್ಕೆ ಸಂಗೀತದ ಮೂಲಕ ಗೀತನಮನ ಸಲ್ಲಿಸಿದ್ದಾರೆ. `ತುಂಬು ಪ್ರತಿ ಮನಸಲ್ಲಿ ಹೊಸ ಹೊಸ ಬಣ್ಣವಾ... ತುಂಬು ಪ್ರತಿ ಮನಸಲ್ಲಿ ಛಲ-ಬಲ ಸ್ಥೈರ್ಯವಾ ..' ಸಿನಿಮಾ ಗೀತೆ ರಚನೆಕಾರ ಕವಿರಾಜ್ 2009ರಲ್ಲಿ ರಚಿಸಿದ್ದ ಗೀತೆಯ ಸಾಲುಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿರುವ ಕೇಜ್, ಅದಕ್ಕೆ ವಿಶೇಷ ಸಂಗೀತಸಂಯೋಜಿಸಿದ್ದಾರೆ.

`ನೀ ಬದಲಾದರೆ ' ಶಿರ್ಷೀಕೆಯ ಈ ಗೀತೆಗೆ ಚೈತ್ರಾ, ಚರಣ್‍ರಾಜ್, ಅವಿನಾಶ್ ಛಬ್ಬಿ ಧ್ವನಿ ನೀಡಿದ್ದು, ಸುಮಾರು ಎರಡೂವರೆ ನಿಮಿಷದ ಅವಧಿಯಲ್ಲಿ ಗೀತೆಯ ಸಾಲುಗಳು, ರವಿ ಅವರ ಸಾಧನೆಯ ಸಾಹಸಕ್ಕೆ ಪೂರಕವಾಗಿ ಬಳಕೆಯಾಗಿವೆ. ದಕ್ಷ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ನಾಡಿನಾದ್ಯಂತ ಹೋರಾಟಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ, ರಿಖಿ ಸಂಗೀತದಲ್ಲಿ ಜನಗಣಮನ ಮೊಳಗಿಸುತ್ತಿರುವ ಗೀತೆಯ ಸಾಲುಗಳು, ನಾಡಿನ ಯುವ ಜನತೆಯಲ್ಲಿ ಹೊಸ ಸ್ಫೂರ್ತಿ ನೀಡುವಂತಿವೆ.

ರಿಖಿ ಕೇಜ್, ದಕ್ಷ ಅಧಿಕಾರಿ ಡಿ.ಕೆ. ರವಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಅಲ್ಲದೆ, `ರವಿಯಂಥ ದಕ್ಷ ಅ„ಕಾರಿ ಸಾವು ತುಂಬಲಾರದ ನಷ್ಟ. ಸಮಾಜಕ್ಕೆ ಇಂದು ಇಂಥ ಪ್ರಾಮಾಣಿಕ ಅಧಿಕಾರಿಗಳು ಬೇಕು. ಅವರ ನಿಗೂಢ ಸಾವು ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ನಿಜಾಂಶ ಬಯಲಿಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಜತೆಗೆ ಅವರ ಸಾಹಸ, ಸಾಧನೆ, ಇಂದಿನ ಯುವಕರಿಗೆ ಸ್ಫೂರ್ತಿಯಾಗಬೇಕು. ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ವಿಶ್ವಾಸ ತುಂಬಬೇಕು ಎನ್ನುವ ನಿಟ್ಟಿನಲ್ಲಿ ಈ ಗೀತೆಯನ್ನು ಬಳಸಿಕೊಳ್ಳಲಾಗಿದೆ' ಎಂದರು.

ಗಾಂಧೀಜಿಯ 'Be the change you want to see me' ಮಾತುಗಳನ್ನು ಆಧರಿಸಿ 2009ರಲ್ಲಿ ರಿಖಿ ಕೇಜ್ ಅವರು ಅಲ್ಬಂ ಹೊರ ತಂದಿದ್ದರು. ಆಗ ನಾನು `ನೀ ಬದಲಾದರೆ' ಶೀರ್ಷಿಕೆಯಲ್ಲಿ ಯುವಕರಲ್ಲಿ ವಿಶ್ವಾಸ ತುಂಬುವ ಸಾಲುಗಳನ್ನು ಬರೆದಿದ್ದೆ. ಅದನ್ನೆ ಈಗ ರಿಖಿ ಅವರು ಸಾಂದರ್ಭಿಕವಾಗಿ ಬಳಸಿಕೊಂಡು ಮರು ಸಂಗೀತ ಸಂಯೋಜಿಸಿ, ಡಿ.ಕೆ. ರವಿ ಅವರಿಗೆ ಗೀತ ನಮನ ಸಲ್ಲಿಸಿರುವುದು ಅರ್ಥಪೂರ್ಣವಾಗಿದೆ.

-ಕವಿರಾಜ್, ಗೀತ ರಚನೆಕಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com