
ಬೆಂಗಳೂರು: ಮೂಲ ಬೆಂಗಳೂರು ವಿವಿ ಛಿದ್ರ ಬೇಡ ಎಂದು ಒತ್ತಾಯಿಸಲು ಒಂದೆರಡು ವಾರದಲ್ಲಿ ವಿವಿ ನಿಯೋಗ ತೆರಳಲಿದೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ಬಿ. ಎಂ. ತಿಮ್ಮೇಗೌಡ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗ ಮಾಡಿ, ಆದರೆ, ಸೆಂಟ್ರಲ್ ಕಾಲೇಜು ಮತ್ತು ಜ್ಞಾನಭಾರತಿ ಕ್ಯಾಂಪಸ್ ಹಾಗೂ ನಗರದ ಕೇಂದ್ರ ಭಾಗದ ಕಾಲೇಜುಗಳನ್ನು ವಿವಿಯಲ್ಲೇ ಉಳಿಸಬೇಕು ಎಂದರು.
ಬೆಂಗಳೂರು ವಿವಿ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ 2015-16ನೇ ಸಾಲಿನ ಬಜೆಟ್ ಮಂಡನೆ ಸಂಬಂಧ ಕರೆದಿದ್ದ ಸಿಂಡಿಕೇಟ್ ಸಭೆಯಲ್ಲಿ ಮಂಗಳವಾರ ಈ ನಿರ್ಧಾರ ಕೈಗೊಳ್ಳಲಾಯಿತು. ಮೂಲ ಬೆಂಗಳೂರು ವಿವಿಗೆ ಸುಮಾರು ನಗರ ಕೇಂದ್ರ ಭಾಗದ ಕಾಲೇಜುಗಳು ಸೇರಿದಂತೆ ಸುಮಾರು 350 ಕಾಲೇಜುಗಳನ್ನು ಕೊಟ್ಟರೂ ನಿಭಾಯಿಸಲು ಸಿದ್ಧರಿದ್ದೇವೆ. ಈಗಾಗಲೇ ರಾಣಿ ಚೆನ್ನಮ್ಮ ವಿವಿ ಒಳಗೊಂಡಂತೆ ಕೆಲ ವಿವಿಗಳಲ್ಲಿ ಇಷ್ಟು ಕಾಲೇಜುಗಳಿವೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಸುದ್ದಿಗಾರರಿಗೆ ತಿಳಿಸಿದರು.
ಜ್ಞಾನಭಾರತಿಯಲ್ಲಿ ಮತ್ತೊಂದು ವಿವಿಗೆ ಅವಕಾಶವಿಲ್ಲ
ಜ್ಞಾನಭಾರತಿ ಆವರಣದಲ್ಲಿ ಮತ್ತೊಂದು ವಿವಿಗೆ ಅವಕಾಶ ನೀಡುವುದಿಲ್ಲ. ಯಾಕೆಂದರೆ ಈಗಾಗಲೇ ಇರುವ ವಿವಿ ಆವರಣದಲ್ಲೇ ಮತ್ತೊಂದು ವಿವಿ ಬೇಡ. ಆದ್ದರಿಂದ ಹೊಸ ವಿವಿಗೆ ಸರ್ಕಾರ ಹೊಸ ಜಾಗಹುಡುಕಲಿ. ಹೊಸದಾಗಿ ಸಿಬ್ಬಂದಿ ನೇಮಿಸಲಿ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಖೋತಾ ಬಜೆಟ್ ಮಂಡನೆ: ಬೆಂಗಳೂರು ವಿಶ್ವವಿದ್ಯಾಲಯವು 2015-16ನೇ ಸಾಲಿನ ಖೋತಾ ಬಜೆಟ್ ಅನ್ನು ಮಂಡಿಸಿದೆ. ಅಂದರೆ ಒಟ್ಟಾರೆ ಬಜೆಟ್ ನ ಮೊತ್ತ 381.24 ಕೋಟಿ. ಖರ್ಚಿನ ಅಂದಾಜು ರು.423.79 ಕೋಟಿ. ಈ ಸಾಲಿನ ಆಯವ್ಯಯದಲ್ಲಿ ರಾಮನಗರ ಸ್ನಾತಕೋತ್ತರ ಕೇಂದ್ರಕ್ಕೆ 1.6 ಕೋಟಿ, ಕೋಲಾರ ಸ್ನಾತಕೋತ್ತರ ಕೇಂದ್ರಕ್ಕೆ ಕೇಂದ್ರಕ್ಕೆ 29 ಕೋಟಿ ಅನುದಾನ ಘೋಷಿಸಿದೆ.
ಅಪೂರ್ಣಗೊಂಡಿರುವ ಕಟ್ಟಡಗಳ ಕಾಮಗಾರಿಯನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸುವುದು, ಸುವರ್ಣ ಮಹೋತ್ಸವ ಭವನ ನಿರ್ಮಿಸುವುದು, ಹಳೇ ಗೆಸ್ಟ್ ಹೌಸ್ ನವೀಕರಣ, ಕಾಮರ್ಸ್ ಕಟ್ಟಡ ಕಾಮಗಾರಿ ಕೈಗೊಳ್ಳುವುದು, ಓಬಿಸಿ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡುವುದು ಸೇರಿದಂತೆ ನಾನಾ ಯೋಜನೆಗಳನ್ನು ಈ ಸಾಲಿನ ಆಯವ್ಯಯದಲ್ಲಿ ಕೈಗೊಳ್ಳಲಾಗುವುದು.
ಕೊರತೆ ಹಣವನ್ನು ರೂಸಾ ಮತ್ತಿತರ ಯೋಜನೆಗಳ ಮೂಲಕ ಭರಿಸಲಾಗುವುದು. ಆದರೆ ಯಾವ ಕೆಲಸಕ್ಕೆ ಎಷ್ಟು ಹಣ? ಎಂಬುದನ್ನು ವಿದ್ಯಾವಿಷಕ ಪರಿಷತ್‍ನಲ್ಲಿ ಚರ್ಚಿಸಿದ ನಂತರ ಅಂತಿಮಗೊಳಿಸಲಾಗುವುದು ಎಂದು ಪ್ರೊ. ಬಿ. ತಿಮ್ಮೇಗೌಡರು ತಿಳಿಸಿದರು.
ವಿವಿಯನ್ನು ಮೂರು ಭಾಗ ಮಾಡುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಮೂಲ ವಿವಿಯ ಹೃದಯ ಭಾಗವಾಗಿರುವ ಸೆಂಟ್ರಲ್ ಕಾಲೇಜು ಮತ್ತು ಜ್ಞಾನಭಾರತಿ ಕ್ಯಾಂಪಸ್‍ಗಳನ್ನು ಯಥಾಸ್ಥಿತಿ ಉಳಿಸಿ ಕೊಡಬೇಕು. ಉಳಿದ ಎರಡು ವಿಶ್ವವಿದ್ಯಾಲಯಗಳನ್ನು ಕೋಲಾರ ಮತ್ತು ರಾಮನಗರಗಳಲ್ಲಿ ಮಾಡಬಹುದು. ಇದರಿಂದ ಆಯಾ ಭಾಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
-ಪ್ರೊ. ಬಿ.ಎಂ. ತಿಮ್ಮೇಗೌಡ, ಕುಲಪತಿ
Advertisement