
ಬೆಂಗಳೂರು: ಬಿಬಿಎಂಪಿ ಆಡಳಿತಾತ್ಮಕ ವ್ಯವಸ್ಥೆಯ ಲೋಪ ಹಾಗೂ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿನ ಅಕ್ರಮಗಳ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಉಪ ಮಹಾಲೇಖಪಾಲರ(ಡಿಎಜಿ)ಕಚೇರಿಯಿಂದ ಬಿಬಿಎಂಪಿ ಆಡಳಿತಾತ್ಮಕ ವ್ಯವಸ್ಥೆ ಬಗ್ಗೆ ವ್ಯಕ್ತಪಡಿಸಿದ ಆಕ್ಷೇಪಣೆ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಅಕ್ರಮಕ್ಕೆ ಇನ್ನೂ ಕ್ರಮ ಕೈಗೊಂಡಿಲ್ಲ. 2010ರಲ್ಲಿ ಉಪ ಮಹಾಲೇಖಪಾಲರು ಕಳುಹಿಸಿದ್ದ ಪತ್ರಕ್ಕೆ ಬಿಬಿಎಂಪಿಯಿಂದ ಉತ್ತರ ಮಾತ್ರ ದೊರೆತಿದೆ. ಆದರೆ, ಆಯುಕ್ತರು ವ್ಯವಸ್ಥೆ ಬದಲಿಸಲು ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರಿಗೆ ಬಾಕಿ ಪಾವತಿಸುವಲ್ಲಿ, ವಿಶೇಷ ಎಲ್‍ಒಸಿ ನೀಡುವಲ್ಲೂ ನಿಯಂತ್ರಣ ವಿಲ್ಲ ಎಂದು ಸದಸ್ಯರು ಆರೋಪಿಸಿದರು.
ಚುಕ್ಕೆ ಗುರುತಿನ ಪ್ರಶ್ನೆಯಡಿ ಮಾತನಾಡಿದ ಬಿಜೆಪಿಯ ಪದ್ಮನಾಭರೆಡ್ಡಿ, `2010ರ ಮಾರ್ಚ್ ಅಂತ್ಯದಲ್ಲಿ ನಗದು ನಿರ್ವಹಣಾ ವ್ಯವಸ್ಥೆ ಬಗ್ಗೆ ಡಿಎಜಿ ಆಕ್ಷೇಪಣೆ ಸಲ್ಲಿಸಿದ್ದರು. ನಂತರ ಆಕ್ಷೇಪಣೆಗೆ 15 ದಿನದೊಳಗೆ ಉತ್ತರಿಸುವಂತೆ ಆದೇಶಿಸಲಾಗಿತ್ತು. ಅಂದಿನ ಆಡಳಿತಾಧಿಕಾರಿಗಳು ವ್ಯವಸ್ಥೆ ಹಾಳು ಮಾಡಿದ್ದು, ಪಾಳೇಗಾರರಂತೆ ಆಡಳಿತ ನಡೆಸಿದ್ದರು. ಬಿಬಿಎಂಪಿಯ ಇಂದಿನ ಆರ್ಥಿಕ ಸ್ಥಿತಿಗೆ ಇದೇ ಕಾರಣವಾಗಿದೆ. ಡಿಎಜಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿಲ್ಲ. ಎಲ್ ಒಸಿ ನೀಡುವುದೇ ಮುಖ್ಯ ಲೆಕ್ಕಾಧಿಕಾರಿಯ ಕೆಲಸವಾಗಿದ್ದು, ಅಧಿಕಾರಿಗಳ ನಿಯಂತ್ರಣಕ್ಕೆ ಆಯುಕ್ತರು ಕ್ರಮ ಕೈಗೊಂಡಿಲ್ಲ' ಎಂದು ದೂರಿದರು.
ಕಾಂಗ್ರೆಸ್‍ನ ಗುಣಶೇಖರ್ ಮಾತನಾಡಿ, `ಸಿಎಜಿ ವರದಿಯಲ್ಲೂ ಬಿಬಿಎಂಪಿ ಆಡಳಿತದ ಲೋಪಗಳನ್ನು ತೋರಿಸಲಾಗಿದೆ. ಹಿಂದಿನ ಬಜೆಟ್ ವೊಂದರಲ್ಲಿ ಆದಾಯ ರು.2,500 ಕೋಟಿ ಎಂದು ತಿಳಿಸಿ ರು. 3,397 ವೆಚ್ಚ ಮಾಡಲಾಗಿತ್ತು. ಸರ್ಕಾರಕ್ಕೆ ಬಜೆಟ್ ಸಲ್ಲಿಸಿ ಅನುಮೋದನೆ ಪಡೆದ ಮೇಲೂ ವೆಚ್ಚದ ಮೊತ್ತ ಹೆಚ್ಚಾಗಿದೆ. ಅನುಮೋದನೆ ಪಡೆದ ನಂತರ ಬಜೆಟ್ ಮೀರಿ ವೆಚ್ಚ ಮಾಡಿರುವುದು ಸರಿಯಲ್ಲ. 5 ವರ್ಷಗಳಲ್ಲಿ ಲೆಕ್ಕಾಧಿಕಾರಿ ಕಚೇರಿಯಲ್ಲಿ ನಡೆದ ಅಕ್ರಮ ಬಹಿರಂಗಪಡಿಸಬೇಕು' ಎಂದು ಆಗ್ರಹಿಸಿದರು.ಸಭೆಯ ಕೊನೆಯಲ್ಲಿ ಇದಕ್ಕೆ ಉತ್ತರ ನೀಡಲಾಗುವುದು ಎಂಬ ಉಪ ಮೇಯರ್ ರಂಗಣ್ಣ ಅವರ ಪ್ರತಿಕ್ರಿಯೆಗೆ ಅಸಮಾಧಾನಗೊಂಡ ಗುಣಶೇಖರ್ ಸಭಾತ್ಯಾಗ ಮಾಡಿದರು.
ಪರಿಣಿತರಿಲ್ಲ: ಸದಸ್ಯರಿಗೆ ಉತ್ತರ ನೀಡಿದ ಆಯುಕ್ತ ಎಂ.ಲಕ್ಷ್ಮಿನಾರಾಯಣ, ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಪರಿಣಿತರ ಅಭಾವವಿದೆ. ಎಲ್ಲ ವಿಭಾಗಗಳಲ್ಲಿ ಮುಖ್ಯಸ್ಥರು ನಿರ್ಣಯ ಕೈಗೊಂಡರೆ, ಲೆಕ್ಕಾಧಿಕಾರಿ ಕಚೇರಿಯ ವಿಚಾರಗಳು ನೇರವಾಗಿ ಆಯುಕ್ತರ ಬಳಿಗೇ ಬರುತ್ತಿವೆ. ಆದರೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಾಲ ಕಡಿಮೆ ಮಾಡಿ, ಆದಾಯ ಹೆಚ್ಚುವಂತೆ ಮಾಡಲಾಗಿದೆ. ಹೀಗಾಗಿ ಈ ಬಾರಿ ಕಡಿಮೆ ಗಾತ್ರದ ಬಜೆಟ್ ಮಂಡಿಸಲಾಗಿದೆ. ಆನ್‍ಲೈನ್ ವ್ಯವಸ್ಥೆ ತಂದಿದ್ದರೂ ಅಧಿಕಾರಿಗಳು ಕಂಪ್ಯೂಟರ್ ಬಳಸುತ್ತಿಲ್ಲ. ಸ್ಪಷ್ಟ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಮೇಯರ್‍ರಿಂದಲೇ ರು.80 ಕೋಟಿಗೂ ಅಧಿಕ ಮೊತ್ತದ ಎಲ್ಒಸಿ!
ಮೇಯರ್ ಶಾಂತಕುಮಾರಿ ಅವರೊಬ್ಬರೇ ರು.80 ಕೋಟಿಗೂ ಅಧಿಕ ಮೊತ್ತದ ಎಲ್‍ಒಸಿ ಕೊಡಿಸಿದ್ದಾರೆ ಎಂಬ ವದಂತಿ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿಯ ಹರೀಶ್, ಎಲ್ಓಸಿ ನೀಡಲು ಹಣ ಪಡೆಯುವ ಅಧಿಕಾರಿಗಳು ಮೇಯರ್ ಮೇಲೆ ಆರೋಪ ಹೊರಿಸುತ್ತಿದ್ದಾರೆ. ರು. 10 ಕೋಟಿಗೂ ಅಧಿಕ ಮೊತ್ತದ ಎಲ್ಒಸಿ ಮೇಯರ್ ನೀಡಿದ್ದಾರೆ ಎಂದಾಗ ಆಕ್ರೋಶಗೊಂಡ ಮೇಯರ್ ಆಧಾರವಿಲ್ಲದೆ ಆರೋಪಬ ಮಾಡುವಾಗುತ್ತಿದೆ. ಕೂಡಲೇ ವಾರ್ಡ್ ವಾರು ಎಷ್ಟು ಯಾರಿಗೆ ಎಲ್ಒಸಿ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ನೀಡಬೇಕು ಎಂದು ಸಿಎಒ ಕನಕರಾಜು ಅವರಿಗೆ ಸೂಚಿಸಿದರು.
Advertisement