ಧ್ವನಿ ಏರದಿರಲಿ ಸರ್ಕಾರಕ್ಕೆ ಹೈಆದೇಶ ತಂದ ಧರ್ಮಸಂಕಟ

ಅನುಮತಿ ಇಲ್ಲದೇ ಧಾರ್ಮಿಕ ಕೇಂದ್ರದಲ್ಲಿ ಧ್ವನಿ ವರ್ಧಕ ಬಳಸುತ್ತಿದ್ದರೆ ಅಂಥವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ...
ಕರ್ನಾಟಕ ಹೈ ಕೋರ್ಟ್
ಕರ್ನಾಟಕ ಹೈ ಕೋರ್ಟ್
Updated on

ಬೆಂಗಳೂರು: ಅನುಮತಿ ಇಲ್ಲದೇ ಧಾರ್ಮಿಕ ಕೇಂದ್ರದಲ್ಲಿ ಧ್ವನಿ ವರ್ಧಕ ಬಳಸುತ್ತಿದ್ದರೆ ಅಂಥವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಇದರಿಂದಾಗಿ ಧಾರ್ಮಿಕ ಸ್ಥಳಗಳಲ್ಲಿ ಅನುಮತಿ ಪಡೆಯದೇ ಅಥವಾ ಪಡೆದು, ಸಮಯದ ಪರಿವೆ ಇಲ್ಲದೆ ಧ್ವನಿವರ್ಧಕ ಬಳಸುವುದಕ್ಕೆ ತಡೆ ಹಾಕುವ ಅನಿವಾರ್ಯ ಪೊಲೀಸರಿಗೆ ಎದುರಾಗಿದೆ. ಹೃದಯ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಆರೋಗ್ಯದ ಮೇಲೆ ಮಸೀದಿಯಿಂದ ಧ್ವನಿವರ್ಧಕದ ಮೂಲಕ ಹೊರಹೊಮ್ಮುವ ಪ್ರಾರ್ಥನೆಯ ಶಬ್ದ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಧ್ವನಿವರ್ಧಕ ಬಳಸಿ ಮಾಡುವ ಪ್ರಾರ್ಥನೆಯಿಂದಾಗಿ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಧ್ವನಿವರ್ಧಕಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ಕೋರಿ ಬೆಂಗಳೂರು ಗೋವಿಂದರಾಜ ನಗರದ ನಿವಾಸಿ ಸುಮಂಗಲಾ ಎ. ಸ್ವಾಮಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

ಯಾಕೆ ಕ್ರಮಕೈಗೊಂಡಿಲ್ಲ?
ವಿಚಾರಣೆ ನಡೆಸಿದ ನ್ಯಾ. ಕೆ.ಎಲ್. ಮಂಜುನಾಥ್, ನ್ಯಾ.ರಾಘವೇಂದ್ರ ಸಿಂಗ್ ಚೌವ್ಹಾಣ್ ಅವರಿದ್ದ ವಿಭಾಗೀಯ ಪೀಠ, `ಧ್ವನಿ ವರ್ಧಕಗಳ ಬಳಕೆ ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ. ಧ್ವನಿವರ್ಧಕ ಬಳಕೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದಾಗಿ 2014ರಲ್ಲೇ ಅರ್ಜಿ ದಾರರು ದೂರು ದಾಖಲಿಸಿದ್ದಾರೆ. 2014ರಿಂದ ಈ ವರೆಗೂ ಸರ್ಕಾರ ತಪ್ಪಿತಸ್ಥರ ವಿರುದ್ಧ ಯಾವುದೇ ರೀತಿ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ' ಎಂದು ಪೀಠ ಕಿಡಿಕಾರಿದೆ.

ವಿಚಾರಣೆ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು, ನಿಯಮ ಮೀರಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇವೆ ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, `ನಿಯಮಾನುಸಾರ ಅನುಮತಿ ಪಡೆದು ಅವುಗಳ ಶಬ್ದ ನಿಯಮಿತ ಪ್ರಮಾಣದಲ್ಲಿ ಬಳಸಲಾಗುತ್ತಿದ್ದರೆ ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಕಾನೂನು ಬಾಹಿರವಾಗಿ ಧ್ವನಿ ವರ್ಧಕಗಳನ್ನು ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರೆ ಅಂಥವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುಬೇಕು' ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಏ.6ಕ್ಕೆ ಮುಂದೂಡಿದೆ.

ಧ್ವನಿವರ್ಧಕಗಳಿಗೆ ನಿಯಮಾನುಸಾರ ಅನುಮತಿ ಪಡೆದು ಅವುಗಳ ಶಬ್ದ ನಿಯಮಿತ ಪ್ರಮಾಣದಲ್ಲಿ ಬಳಸಲಾಗುತ್ತಿದ್ದರೆ ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಕಾನೂನು ಬಾಹಿರವಾಗಿ ಧ್ವನಿವರ್ಧಕಗಳನ್ನು ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರೆ ಅಂಥವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com