ಇಬ್ಬರು ಅಧಿಕಾರಿಗಳು ಮಾತೃ ಇಲಾಖೆಗೆ: ಪಾಲಿಕೆ ನಿರ್ಣಯ

ನಕಲಿ ಲೆಟರ್‍ಹೆಡ್ ಪ್ರಕರಣ ಸಂಬಂಧ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಬಿಎಂಟಿಎಫ್ ನಲ್ಲಿ ಪ್ರಕರಣ ದಾಖಲಿಸಿದ್ದ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಕೆ.ಮಥಾಯ್ ಹಾಗೂ ಹಾನಿಯಾದ ಮನೆಗಳ ತೆರವಿಗೆ ಕ್ರಮ ಕೈಗೊಳ್ಳದ ಆರ್‍ಆರ್ ನಗರ...
ಬಿಬಿಎಂಪಿ ಸಭೆ
ಬಿಬಿಎಂಪಿ ಸಭೆ

ಬೆಂಗಳೂರು: ನಕಲಿ ಲೆಟರ್‍ಹೆಡ್ ಪ್ರಕರಣ ಸಂಬಂಧ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಬಿಎಂಟಿಎಫ್ ನಲ್ಲಿ ಪ್ರಕರಣ ದಾಖಲಿಸಿದ್ದ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಕೆ.ಮಥಾಯ್ ಹಾಗೂ ಹಾನಿಯಾದ ಮನೆಗಳ ತೆರವಿಗೆ ಕ್ರಮ ಕೈಗೊಳ್ಳದ ಆರ್‍ಆರ್ ನಗರ ಎಂಜಿನಿಯರ್ ಅಶ್ವತ್ಥರೆಡ್ಡಿಯನ್ನು ವಾಪಸ್ ಮಾತೃ ಇಲಾಖೆಗೆ ಕಳುಹಿಸಲು ಬಿಬಿಎಂಪಿ ಸದಸ್ಯರು ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಂಡರು.

ಇತ್ತೀಚೆಗೆ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವಿ.ಕೃಷ್ಣ ಹಾಗೂ ಕಚೇರಿ ಸಿಬ್ಬಂದಿ ಜಾಹೀರಾತು ವಿಭಾಗದ ಲೆಟರ್ ಹೆಡ್ ನಕಲು ಮಾಡಿ ಮಾಫಿಯಾಕ್ಕೆ ನೆರವಾಗಿದ್ದರು ಎಂದು ಆರೋಪಿಸಲಾಗಿತ್ತು. ಮುಖ್ಯಮಂತ್ರಿಗಳಿಗೆ ಜಾಹೀರಾತುಗಳ ಬಗ್ಗೆ ಸೂಕ್ತ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ನಿರ್ಣಯ ಕೈಗೊಳ್ಳಲಾಯಿತು. ಆರ್‍ಆರ್ ನಗರದಲ್ಲಿ ಹೊಸ ಕಟ್ಟಡ ನಿರ್ಮಾಣದಿಂದ ಹಾನಿಯಾದ 6 ಮನೆಗಳನ್ನು ತೆರವು ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಇಇ ಅಶ್ವತ್ಥರೆಡ್ಡಿ ಮಾತೃ ಇಲಾಖೆಗೆ ಕಳುಹಿಸಲು ನಿರ್ಣಯ ಕೈಗೊಳ್ಳಲಾಯಿತು.

ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಕನಕರಾಜು ಹಾಗೂ ನಾರಾಯಣಸ್ವಾಮಿ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಮೇಯರ್ ಪೀಠದ ಮುಂದೆ ಪ್ರತಿಭಟಿಸಿದರು. ಆದರೆ ಮೇಯರ್ ಶಾಂತಕುಮಾರಿ ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿ ಪ್ರತಿಭಟನೆಗೆ ಅಂತ್ಯ ಹಾಡಿದರು. ಹೆಸರು ಬಹಿರಂಗಕ್ಕೆ ಒತ್ತಾಯ ಕರ್ನಾಟಕ ಗ್ರಾಮೀಣ ಮೂಲಸೌಕರ್ಯಾಭಿವೃದ್ಧಿ ನಿಗಮ(ಕೆಆರ್‍ಐಡಿಎಲ್)ದಲ್ಲಿ ನಿಯಮ ಮೀರಿ ರು.1,832 ಕೋಟಿ ಮೊತ್ತದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಸಭೆಯಲ್ಲಿ ಆರೋಪಿಸಿದರು.

ನಿಗಮದಲ್ಲಿ 57 ಎಂಜಿನಿಯರ್ ಸೇರಿದಂತೆ 138 ಅಧಿಕಾರಿಗಳಿದ್ದಾರೆ. ಹೀಗಾಗಿ ಒಮ್ಮೆಗೆ ರು.115 ಕೋಟಿ ಮೊತ್ತದ ಕಾಮಗಾರಿ ಮಾತ್ರ ನಡೆಸಲು ನಿಗಮಕ್ಕೆ ಅವಕಾಶವಿದೆ. ಆದರೆ, ರು.1,832 ಕೋಟಿ ಮೊತ್ತದ ಕಾಮಗಾರಿಗಳನ್ನು ನಗರದಲ್ಲಿ ಮಾಡುತ್ತಿದೆ. ಹೆಚ್ಚಿನ ಕಾಮಗಾರಿಗಳು ಬಿಬಿಎಂಪಿ ಸ್ಥಾಯಿ ಸಮಿತಿ ಒಪ್ಪಿಗೆ ಪಡೆಯದೆ ಪ್ರಭಾವಿಗಳ ಶಿಫಾರಸು ಮೂಲಕ ನಡೆಯುತ್ತಿವೆ. ಈ ಬಗ್ಗೆ ಈಗಾಗಲೇ ಬಿಎಂಟಿಎಫ್ ಗೆ ದೂರು ದಾಖಲಾಗಿದ್ದು, ಶಿಫಾರಸು ಮಾಡಿದವರ ಹೆಸರು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿ ಅವಧಿಯಲ್ಲೇ ನಿಯಮಮೀರಿ ಕಾಮಗಾರಿ ನಡೆಸಲು ಅವಕಾಶ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. 5 ವರ್ಷಗಳ ಅಕ್ರಮವನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದ ಕಾಂಗ್ರೆಸ್‍ನ ಮಂಜುನಾಥ ರೆಡ್ಡಿ, ಮೇಯರ್ ಪೀಠದೆ ಮುಂದೆ ಪ್ರತಿಭಟಿಸಿದರು. ಗದ್ದಲ ಹೆಚ್ಚಿದ್ದರಿಂದ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

ಕೆಳಹಂತದ ಅಧಿಕಾರಿಗಳಿಗೆ ಎಚ್ಚರಿಸಬೇಕೆಂದು ಸಾಮಾನ್ಯ ದೂರು ನೀಡಲಾಗಿದೆ. ಯಾರ ಹೆಸರು ಹೇಳಿಲ್ಲ. ಈ ವಿಭಾಗದ ಅಧಿಕಾರಿ ಮಥಾಯ್, ದೂರು ನೀಡಲು ಅನುಮತಿ ಪಡೆದಿದ್ದರು. ಜಾಹೀರಾತು ನಿಷೇಧದ ನಂತರ ಹೊಸ ಜಾಹೀರಾತಿಗೆ ಅವಕಾಶ ನೀಡಿಲ್ಲ. ಆದರೆ ಹೋಟೆಲ್‍ವೊಂದಕ್ಕೆ ದಿಕ್ಸೂಚಿ ಇಡಲು ಮಾತ್ರ ಅವಕಾಶ ನೀಡಲಾಗಿದೆ. ಜಾಹೀರಾತು ವಿಭಾಗದಿಂದ ರು.32-ರು.35 ಕೋಟಿ ವಾರ್ಷಿಕ ಆದಾಯವಿದೆ ಎಂದು ಸಿಎಂಗೆ ಕಳೆದ ಅಧಿವೇಶನದಲ್ಲಿ ಸೂಕ್ತ ಮಾಹಿತಿ ನೀಡಲಾಗಿತ್ತು. ಆದರೆ, ಅನಧಿಕೃತ ಫಲಕದ ಬಗ್ಗೆ ಬಿಬಿಎಂಪಿಯಲ್ಲಿ ಇನ್ನೂ ಸ್ಪಷ್ಟತೆಯಿಲ್ಲ.

ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com