
ಬೆಂಗಳೂರು: ಮಗನ ಮೇಲಿನ ಕೋಪಕ್ಕೆ ಆತನ ತಂದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶ್ರೀರಾಂಪುರದ ಹನುಮಂತಪುರ ಕೊಳಗೇರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಗುಣಶೇಖರ್(55) ಕೊಲೆಯಾದ. ಆರೋಪಿ ಸತ್ಯ(30)ನನ್ನು ಬಂಧಿಸಲಾಗಿದೆ ಎಂದು ಶ್ರೀರಾಂಪುರ ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಗುಣಶೇಖರ್‍ನ ಮಗ ಕಾರ್ತಿಕ್(20) ಹಾಗೂ ಸತ್ಯ ಸ್ನೇಹಿತರಾಗಿದ್ದರು. 20 ದಿನಗಳ ಹಿಂದೆ ಮದ್ಯ ತರುವಂತೆ ಕಾರ್ತಿಕ್, ತನಗಿಂತ ಕಿರಿಯನಾದ ಸತ್ಯನಿಗೆ ಹೇಳಿದ್ದ. ಆದರೆ, ಇಂಥ ಕೆಲಸಗಳನ್ನು ನನಗೆ ಹೇಳಬೇಡ. ಅದನ್ನು ಮಾಡುವುದಿಲ್ಲ ಎಂದು ಕಾರ್ತಿಕ್ ಸತ್ಯನಿಗೆ ಹೇಳಿದ್ದ. ಈ ವಿಚಾರವಾಗಿ ಮತ್ತು ಇಬ್ಬರ ನಡುವೆ ಜಗಳವಾಗಿತ್ತು.
ಈ ವೇಳೆ ಕಾರ್ತಿಕ್, ಸಾರ್ವಜನಿಕವಾಗಿ ಸತ್ಯನನ್ನು ಥಳಿಸಿದ್ದ. ಅಲ್ಲದೇ ತನಗಿಂತ ಹಿರಿಯನಾದ ಸತ್ಯನಿಗೆ ನಾನು ಹೊಡೆದು ಬುದ್ದಿ ಕಲಿಸಿದ್ದೇನೆ ಎಂದು ಸ್ನೇಹಿತರ ಬಳಿ ಹೇಳಿ ಕೊಂಡು ಏರಿಯಾದಲ್ಲಿ ಕಾರ್ತಿಕ್ ತಿರುಗಾಡುತ್ತಿದ್ದ. ಈ ವಿಚಾರ ತಿಳಿದು ಕುಪಿತಗೊಂಡಿದ್ದ ಸತ್ಯ, ಗುರುವಾರ ಮಧ್ಯಾಹ್ನ ಕಾರ್ತಿಕ್‍ನನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದ. ಈ ವಿಷಯ ತಿಳಿದ ಕಾರ್ತಿಕ್‍ನ ತಾಯಿ ಸತ್ಯನ ಮನೆಗೆ ಹೋಗಿ ಗಲಾಟೆ ಮಾಡಿ ಬಂದಿದ್ದರು. ರಾತ್ರಿ 9.30ಕ್ಕೆ ಮನೆಗೆ ಬಂದ ಸತ್ಯನಿಗೆ ಕಾರ್ತಿಕ್‍ನ ತಾಯಿ ಬಂದು ಗಲಾಟೆ ಮಾಡಿದ ವಿಚಾರ ಗೊತ್ತಾಗಿ ಅವರ ಮನೆ ಬಳಿ ಹೋಗಿದ್ದ. ಕಾರ್ತಿಕ್ ಮನೆಯಲ್ಲಿಲ್ಲದಿದ್ದರಿಂದ ಆತನ ತಂದೆ ಗುಣಶೇಖರ್ ಜತೆ ಸತ್ಯ ಜಗಳ ತೆಗೆದಿದ್ದಾನೆ.
ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಜೇಬಿನಲ್ಲಿಟ್ಟುಕೊಂಡಿದ್ದ ಚಾಕು ತೆಗೆದು ಗುಣಶೇಖರ್ ತಲೆ ಮತ್ತು ಎದೆಗೆ ಇರಿದಿದ್ದಾನೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದಾರಾದರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ನೀರಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಸ್ನೇಹಿತರೊಂದಿಗೆ ತಲಘಟ್ಟಪುರ ಆವಲಹಳ್ಳಿ ಸಮೀಪದ ಕಲ್ಲು ಕ್ವಾರಿಗೆ ಈಜಲು ತೆರಳಿದ್ದ 9ನೇ ತರಗತಿ ವಿದ್ಯಾರ್ಥಿ ಪವನ್(15) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಚುಂಚಘಟ್ಟ ನಿವಾಸಿ ಪವನ್, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸ್ನೇಹಿತರು ಜತೆ ಕಲ್ಲು ಕ್ವಾರಿಗೆ ಹೋಗಿದ್ದ. ನೀರಿಗಿಳಿದಾಗ ಈಜು ಬಾರದೆ ಮುಳುಗಿದ್ದು, ಸ್ನೇಹಿತರ ರಕ್ಷಿಸಲು ಮುಂದಾದರಾದರೂ ಸಾಧ್ಯವಾಗಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ರಕ್ಷಣಾ ಸಿಬ್ಬಂದಿ ಸುಮಾರು 1 ತಾಸು ಶೋಧ ನಡೆಸಿ, ಶವ ಹೊರತೆಗೆದಿದ್ದಾರೆ. ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement