ರು.2 ಲಕ್ಷ ಲೂಟಿ

ಬ್ಯಾಂಕಿಗೆ ಹಣ ಜಮಾ ಮಾಡಲು ಬಂದಿದ್ದ ಖಾಸಗಿ ಕಂಪನಿ ಉದ್ಯೋಗಿ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು ರು2 ಲಕ್ಷ ಹಣವಿದ್ದ ಬ್ಯಾಗ್ ನೊಂದಿಗೆ ಪರಾರಿಯಾಗಿರುವ ಘಟನೆ ಕೆ.ಆರ್‍ಪುರದಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬ್ಯಾಂಕಿಗೆ ಹಣ ಜಮಾ ಮಾಡಲು ಬಂದಿದ್ದ ಖಾಸಗಿ ಕಂಪನಿ ಉದ್ಯೋಗಿ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು ರು2 ಲಕ್ಷ ಹಣವಿದ್ದ ಬ್ಯಾಗ್ ನೊಂದಿಗೆ ಪರಾರಿಯಾಗಿರುವ ಘಟನೆ ಕೆ.ಆರ್‍ಪುರದಲ್ಲಿ ನಡೆದಿದೆ.

ಕೆ.ಆರ್.ಪುರ ನಿವಾಸಿ ಶಿವಕುಮಾರ್ ವೈಟ್‍ಫೀಲ್ಡ್ ನ  ಎಲೆಕ್ಟ್ರಾನಿಕ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹಣ ಡ್ರಾ ಮಾಡಿಕೊಂಡು ಬರುವಂತೆ ಮ್ಯಾನೇಜರ್ ಜಯ ಕುಮಾರ್ ಅವರು ಶಿವಕುಮಾರ್‍ಗೆ ರು.2 ಲಕ್ಷ ಚೆಕ್ ನೀಡಿದ್ದರು. ಶುಕ್ರವಾರ ಬೆಳಗ್ಗೆ 10.30ಕ್ಕೆ ರಾಮಮೂರ್ತಿನಗರ ದೂರವಾಣಿ ನಗರದಲ್ಲಿರುವ ಎಸ್‍ಬಿಐ ಶಾಖೆಗೆ ಆಗಮಿಸಿದ ಶಿವಕುಮಾರ್ ಹಣ ಡ್ರಾ ಮಾಡಿದ್ದರು.

ಹಣವನ್ನು ಸಮೀಪದ ಎಚ್‍ಡಿಎಫ್ ಸಿ ಬ್ಯಾಂಕ್ ಖಾತೆಗೆ ಜಮೆ ಮಾಡಲು ಹೋಗಿದ್ದರು. ಬ್ಯಾಂಕ್ ಮುಂದೆ ಬೈಕ್ ನಿಲ್ಲಿಸುತ್ತಿದ್ದಂತೆ ನಿಮ್ಮ ಮೈ ಮೇಲೆ ಗಲೀಜು ಬಿದ್ದಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಹೇಳಿದ್ದಾನೆ. ಅದನ್ನು ನೋಡಲು ಶಿವಕುಮಾರ್ ಅವರು ಹಣವಿದ್ದ ಬ್ಯಾಗನ್ನು ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲಿಟ್ಟಿದ್ದಾರೆ. ಅದೇ ವೇಳೆ ಮತ್ತೊಬ್ಬ ಆಗಮಿಸಿ ನಿಮಗೆ ಸೇರಿದ ಹಣ ಬಿದ್ದಿದೆ ನೋಡಿ ಎಂದು ಕೆಳಗೆ ಬಿದ್ದ ರು.10ರ ನೋಟು ತೋರಿಸಿದ್ದಾನೆ. ಅದರ ಪಕ್ಕದಲ್ಲೇ ಮತ್ತೆರೆಡು ನೋಟುಗಳು ಬಿದ್ದಿದ್ದನ್ನು ಗಮನಿಸಿದ ಶಿವಕುಮಾರ್, ಅವುಗಳನ್ನು ಎತ್ತಿಕೊಳ್ಳುತ್ತಿದ್ದರು. ಅಷ್ಟರಲ್ಲೇ ಈ ಕಡೆ ಬೈಕ್ ಮೇಲಿಟ್ಟಿದ್ದ ಹಣದ ಬ್ಯಾಗ್‍ನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com