ಆರತಿಗೂ, ಕೀರ್ತಿಗೂ ಒಂದೇ ಮಗು ಸಾಕು: ಸಿದ್ದರಾಮಯ್ಯ

ಹೆಣ್ಣು ಭ್ರೂಣಹತ್ಯೆ ಹೆಚ್ಚಾಗುತ್ತಿದ್ದು, ಎಷ್ಟೇ ಒತ್ತಡ ಬಂದರೂ ಮಹಿಳೆಯರು ಭ್ರೂಣಹತ್ಯೆಗೆ ಅವಕಾಶ ಕೊಡಬಾರದು. ಭ್ರೂಣಹತ್ಯೆಗೆ ಅವಕಾಶ ನೀಡಿದರೆ ಪುರುಷರು ಮತ್ತು ಮಹಿಳೆಯರಲ್ಲಿನ ಅನುಪಾತ ಕಡಿಮೆಯಾಗಲಿದೆ...
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಹೆಣ್ಣು ಭ್ರೂಣಹತ್ಯೆ ಹೆಚ್ಚಾಗುತ್ತಿದ್ದು, ಎಷ್ಟೇ ಒತ್ತಡ ಬಂದರೂ ಮಹಿಳೆಯರು ಭ್ರೂಣಹತ್ಯೆಗೆ ಅವಕಾಶ ಕೊಡಬಾರದು. ಭ್ರೂಣಹತ್ಯೆಗೆ ಅವಕಾಶ ನೀಡಿದರೆ ಪುರುಷರು ಮತ್ತು ಮಹಿಳೆಯರಲ್ಲಿನ ಅನುಪಾತ ಕಡಿಮೆಯಾಗಲಿದೆ.

ಆರತಿಗೊಬ್ಬ ಮಗಳು-ಕೀರ್ತಿಗೊಬ್ಬ ಮಗ ಎಂಬುದು ಬದಲಾಗಬೇಕು. ಆರತಿಗೂ, ಕೀರ್ತಿಗೂ ಒಂದೇ ಮಗು ಸಾಕು ಎಂಬ ಮನೋಭಾವನೆ ಬೆಳೆಯಬೇಕು. ಹೆಣ್ಣು ಅಥವಾ ಗಂಡು ಒಂದೇ ಎಂದಾಗಬೇಕು. ಗಂಡು ಮಕ್ಕಳಿಗೆ ಸಮನಾಗಿ ಹೆಣ್ಣು ಮಕ್ಕಳನ್ನು ಬೆಳೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವರದಕ್ಷಿಣೆ ಕಿರುಕುಳ ಸೇರಿದಂತೆ ಮಹಿಳೆಯರ ಮೇಲಿನ ದಬ್ಬಾಳಿಕೆ ತಡೆಗಟ್ಟಲು ಬಿಗಿ ಕಾನೂನು ರೂಪಿಸಲಾಗಿದೆ. ಮಹಿಳೆಯರಿಗೆ ಅನುಕೂಲವಾಗಲಿ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲಾಗುತ್ತಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಲಾಗುತ್ತಿದೆ.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ ಹಾಗೂ ಚಿಕಿತ್ಸೆ ನೀಡಲು ಪ್ರತಿಯೊಂದು ಜಿಲ್ಲಾ ಆಸ್ಪತ್ರೆಗಳಲ್ಲಿ ಸಾಂತ್ವನ ಕೇಂದ್ರ ಆರಂಭಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಎಲ್ಲ ಸಹಕಾರ ನೀಡಲಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಸೌಲಭ್ಯವಿದ್ದು ಗ್ರಾಪಂಗಳಲ್ಲಿ ಶೇ.50ರಷ್ಟು ಮೀಸಲು ಸೌಲಭ್ಯ ಇದೆ. ಆದರೆ, ವಿಧಾನಸಭೆ ಹಾಗೂ ಸಂಸತ್‍ನಲ್ಲಿ ಶೇ.33ರಷ್ಟು ಮೀಸಲು ಸೌಲಭ್ಯ ನೀಡುವ ಕಾನೂನು ಜಾರಿಯಾಗಬೇಕಿದೆ. ಮಹಿಳೆಯರು ಅಬಲೆಯರು ಎಂದು ಕಾಣುವ ಸ್ಥಿತಿ ಬದಲಾಗಬೇಕು ಎಂದರು.

ರಾಜ್ಯದಲ್ಲಿ ಮಹಿಳಾ ಸಾಕ್ಷರತೆ ಸರಾಸರಿ ಶೇ.66ರಷ್ಟಿದ್ದು, ಪುರುಷರಿಗಿಂತ ಕಡಿಮೆ ಇದೆ. ಪುರುಷರ ಸಾಕ್ಷರತೆ ಶೇ.82ರಷ್ಟಿದ್ದು, ಹೆಣ್ಣು ಮಕ್ಕಳು ನೂರಕ್ಕೆ ನೂರರಷ್ಟು ಸಾಕ್ಷರರಾಗಬೇಕು. ಹೆಣ್ಣುಮಕ್ಕಳು ಶಾಲೆ ಬಿಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ 1ರಿಂದ 10ನೇ ತರಗತಿ ಹೆಣ್ಣು ಮಕ್ಕಳು ಶಾಲೆಗೆ ಹಾಜರಾದರೆ ಪ್ರತಿದಿನ ರು. 2ಗಳಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅದು ಅವರ ಖಾತೆಗೆ ಜಮಾವಣೆಯಾಗುತ್ತಿದೆ. 10ನೇ ತರಗತಿ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಈ ಹಣ ನೆರವಾಗಲಿದೆ ಎಂದರು.

ಸಮಾರಂಭದಲ್ಲಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಲೇಖಕಿ ಪ್ರೇಮಾ ಭಟ್, ಸರ್ಕಾರಿ ನೌಕರರ ಸಂಘದ
ಅಧ್ಯಕ್ಷ ಡಿ.ಪಿ. ಮಂಜೇಗೌಡ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com