ವರ್ತೂರು ವಿರುದ್ಧ ಕೇಸ್

ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಲಾರಿ ಬಿಡುಗಡೆ ಮಾಡಬೇಕೆಂದು ಫೋನ್‍ನಲ್ಲಿ ತಹಸೀಲ್ದಾರ್‍ಗೆ ಬೆದರಿಕೆ ಹಾಕಿದ ಕೋಲಾರ ಶಾಸಕ ವರ್ತೂರು ಪ್ರಕಾಶ್‍ಗೆ ಸಂಕಷ್ಟ ಎದುರಾಗಿದೆ...
ಕೋಲಾರ ಶಾಸಕ ವರ್ತೂರು ಪ್ರಕಾಶ್‍
ಕೋಲಾರ ಶಾಸಕ ವರ್ತೂರು ಪ್ರಕಾಶ್‍

ಬೆಂಗಳೂರು: ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಲಾರಿ ಬಿಡುಗಡೆ ಮಾಡಬೇಕೆಂದು ಫೋನ್‍ನಲ್ಲಿ ತಹಸೀಲ್ದಾರ್‍ಗೆ ಬೆದರಿಕೆ ಹಾಕಿದ ಕೋಲಾರ ಶಾಸಕ ವರ್ತೂರು ಪ್ರಕಾಶ್‍ಗೆ ಸಂಕಷ್ಟ ಎದುರಾಗಿದೆ.

ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಎಂ.ಟಿ.ಗಿರೀಶ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಕ್ರಮ ಮರಳು ಸಾಗಣೆ ಲಾರಿಗಳನ್ನು ಪತ್ತೆ ಹಚ್ಚಿದ್ದ ಕೋಲಾರ ತಹಸೀಲ್ದಾರ್, ಸ್ಥಳೀಯ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮರಳು ಸಾಗಿಸುತ್ತಿದ್ದ 4 ಲಾರಿ ಜಪ್ತಿ ಮಾಡಿ ಠಾಣೆ ಬಳಿ ನಿಲ್ಲಿಸಿದ್ದರು. ಆದರೆ, ಈ ವಿಚಾರ ತಿಳಿದ ಶಾಸಕ ವರ್ತೂರು ಪ್ರಕಾಶ್, ತಹಸೀಲ್ದಾರ್‍ಗೆ ಕರೆ ಮಾಡಿ ಬಿಡುಗಡೆ ಮಾಡಬೇಕು ಎಂದು ಧಮ್ಕಿ ಹಾಕಿದ್ದರು.

ಈ ಸಂಭಾಷಣೆಯ ಆಡಿಯೋವನ್ನು ಮಾಜಿ ಸಿಎಂ ಎಚ್‍ಡಿಕೆ ಸಿಡಿ ರೂಪದಲ್ಲಿ ಮಾ.21ರಂದು ಬಿಡುಗಡೆ ಮಾಡಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಕರ್ನಾಟಕ ರಣಧೀರ ಪಡೆಯ ಬಿ.ಹರೀಶ್ ಕುಮಾರ್, ಕರ್ನಾಟಕ ಮಾವನ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಮಿತಿಯ ಎಂ.ಟಿ ಗಿರೀಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಬಗ್ಗೆ ಪರಿಶೀಲನೆ ನಡೆಸಿದ ಲೋಕಾಯುಕ್ತ ಹೆಚ್ಚುವರಿ ರಜಿಸ್ಟ್ರಾರ್, ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ (ಎಡಿಜಿಪಿ) ಸೂಚನೆ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿ ಕಲಂ ಅನ್ವಯ ಶಿಕ್ಷಾರ್ಹ ಅಪರಾಧ ಎನ್ನುವುದು ಕಂಡು ಬಂದಿರುವುದರಿಂದ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳಲು ಅರ್ಹವಾದ ಪ್ರಕರಣ ಎಂದು ಲೋಕಾಯುಕ್ತ ರಜಿಸ್ಟ್ರಾರ್ ವರದಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com