ರಾಜ್ಯದ 10 ಯೋಜನೆಗಳಿಗೆ ಕೇಂದ್ರದ ರು.10,000 ಕೋಟಿ!

ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ರು.10,000 ಕೋಟಿ ವೆಚ್ಚ ಮಾಡುತ್ತಿದ್ದು, ವರ್ಷಾಂತ್ಯದಲ್ಲಿ 10 ಯೋಜನೆಗಳಿಗೆ ಚಾಲನೆ ದೊರೆಯಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಬಂದರು ಖಾತೆ ಸಚಿವ ನಿತಿನ್ ಜಯರಾಂ ಗಡ್ಕರಿ ಹೇಳಿದ್ದಾರೆ...
ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಬಂದರು ಖಾತೆ ಸಚಿವ ನಿತಿನ್ ಗಡ್ಕರಿ
ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಬಂದರು ಖಾತೆ ಸಚಿವ ನಿತಿನ್ ಗಡ್ಕರಿ

ಬೆಂಗಳೂರು: ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ರು.10,000 ಕೋಟಿ ವೆಚ್ಚ ಮಾಡುತ್ತಿದ್ದು, ವರ್ಷಾಂತ್ಯದಲ್ಲಿ 10 ಯೋಜನೆಗಳಿಗೆ ಚಾಲನೆ ದೊರೆಯಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಬಂದರು ಖಾತೆ ಸಚಿವ ನಿತಿನ್ ಜಯರಾಂ ಗಡ್ಕರಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಬಿಜಾಪುರ-ಕಲಬುರಗಿ ಹುಮನಾಬಾದ್ ಎನ್‍ಎಚ್-218 (ಎನ್‍ಎಚ್-50) ಹಾಗೂ ಮಧುಗಿರಿ- ಗೌರಿಬಿದನೂರು- ಚಿಕ್ಕಬಳ್ಳಾಪುರ- ಚಿಂತಾಮಣಿ- ಮುಳಬಾಗಲು ಎನ್‍ಎಚ್-234(ಎಚ್‍ಎಚ್-69) ದ್ವಿಪಥ ರಸ್ತೆಯ ಅಭಿವೃದ್ಧಿ ಹಾಗೂ ಉನ್ನತೀಕರಣ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವರ್ಷ ನವೆಂಬರ್ ಅಥವಾ ಡಿಸೆಂಬರ್‍ರೊಳಗೆ ಈ ಹತ್ತು ಯೋಜನೆಗಳ 1,572 ಕಿಮೀ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿಗಳನ್ನು ಸಿಮೆಂಟ್ ರಸ್ತೆಯನ್ನಾಗಿ ಮಾಡುವ ಉದ್ದೇಶವಿದೆ.

ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಒಟ್ಟು 106 ಸಿಮೆಂಟ್ ಕಾರ್ಖಾನೆಗಳು ಭಾರತದಲ್ಲಿದ್ದು, 37 ಕಂಪನಿಗಳು ಕಡಿಮೆ ದರದಲ್ಲಿ ಸಿಮೆಂಟ್ ನೀಡಲು ಮುಂದೆ ಬಂದಿವೆ. ಒಂದು ಮೂಟೆಗೆ ರು.120, ರು.130 ಮತ್ತು ರು.140ರಂತೆ ಸಿಮೆಂಟ್ ನೀಡಲು ಬಿಡ್ ಸಲ್ಲಿಸಿವೆ. ಇದು ಪರಿಶೀಲನಾ ಹಂತದಲ್ಲಿದ್ದು, ಬಳಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ಭ್ರಷ್ಟಾಚಾರಕ್ಕೆ ಇಲ್ಲಿ ಅವಕಾಶ ಇಲ್ಲದಂತೆ ಕ್ರಮ ವಹಿಸಿದ್ದು, ಕಂಪನಿಗಳಿಗೆ ಹಣ ನೀಡಿದರೆ, ಆ ಮೊತ್ತಕ್ಕೆ ಸಿಮೆಂಟ್ ನೀಡಬೇಕು. ಹೀಗಾಗಿ ಇದು ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಇವುಗಳಿಂದ ತಯಾರಿಸದ ರಸ್ತೆಗಳು ಸುಮಾರು 40ರಿಂದ 50 ವರ್ಷ ಬಾಳಿಕೆ ಬರಲಿವೆ. ಸುಗಮ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗದು ಎಂದವರು ಅಭಿಪ್ರಾಯಪಟ್ಟರು.

ರಾಜ್ಯ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, `ರಾಜ್ಯದಲ್ಲಿನ ಹೆದ್ದಾರಿಗಳ ಅಭಿವೃದ್ಧಿ ಹಾಗೂ ಹೊಸ ಯೋಜನೆಗಳಿಗೆ ಅನುಮೋದನೆ ನೀಡುವಂತೆ' ಮನವಿ ಮಾಡಿದರು. ಕಾನೂನು ಸಚಿವ ಡಿ.ವಿ. ಸದಾನಂದಗೌಡ, ಸಾರ್ವಜನಿಕ ಉದ್ದಿಮೆ ಮತ್ತು ಬೃಹತ್ ಕೈಗಾರಿಕೆ ರಾಜ್ಯ ಸಚಿವ ಜಿ.ಎಂ. ಸಿದ್ದೇಶ್ವರ, ಲೋಕಸಭೆ ಪ್ರತಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಸಂಗಣ್ಣ ಕರಡಿ,  ಮುದ್ದಹನುಮೇಗೌಡ, ಚಂದ್ರಪ್ಪ ಇದ್ದರು.

ಎಕ್ಸ್ ಪ್ರೆಸ್ ಹೈವೇ
ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಚೆನ್ನೈ-ಬೆಂಗಳೂರು ಎಕ್ಸ್‍ಪ್ರೆಸ್ ಹೈವೇ ನಿರ್ಮಾಣ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇದರಿಂದ ಪ್ರಯಾಣದ
ಸಮಯದಲ್ಲಿ ಸಾಕಷ್ಟು ಉಳಿತಾಯವಾಗಲಿದ್ದು, ಅಭಿವೃದ್ಧಿಗೆ ಪೂರಕವಾ ಗಲಿದೆ. ಇದಲ್ಲದೆ ನೂತನ ಯೋಜನೆಗಳೆ ಲ್ಲವೂ ಕಾಂಕ್ರೀಟೀಕರಣಗೊಳ್ಳಲಿದೆ. ಮೈಸೂರು- ಬೆಂಗಳೂರು ಎನ್‍ಎಚ್-275ನಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣ ಹಾಗೂ ಮಂಡ್ಯ ಬೈಪಾಸ್ ರಸ್ತೆ ಮಾಡಬೇಕಾದ ಅನಿವಾರ್ಯತೆ ಇದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭೂಸ್ವಾಧೀನವೇ ಕಷ್ಟ
ರಸ್ತೆ ಅಭಿವೃದ್ಧಿ ನಮ್ಮ ಉದ್ದೇಶವೂ ಆಗಿದೆ. ಆದರೆ, ನಮ್ಮಲ್ಲಿ ಅದೆಷ್ಟೋ ಯೋಜನೆಗಳಿಗೆ ಹಲವು ಇಲಾಖೆಗಳ ಅನುಮೋದನೆ ದೊರೆಯದೇ ನೆನೆಗುದಿಗೆ ಬಿದ್ದಿವೆ. ಈ ಬಗ್ಗೆ ನಾನು ಯಾರನ್ನೂ ಬೊಟ್ಟು ಮಾಡಿ ತೋರಿಸುವುದಿಲ್ಲ. ಮುಖ್ಯವಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಅರಣ್ಯ, ಪರಿಸರ ಇಲಾಖೆಗಳ ಅನುಮತಿಯ ಸಮಸ್ಯೆ ತಲೆದೋರಿವೆ. ಇವುಗಳು ಎಷ್ಟು ಶೀಘ್ರವಾಗಿ ಬಗೆಹರಿಯುತ್ತವೋ ಅಷ್ಟು ವೇಗವಾಗಿ ಕಾಮಗಾರಿಗಳನ್ನು ಪ್ರಾರಂಭಿಸಬಹುದಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com