ತಿಂಗಳಲ್ಲಿ ರು.631 ಕೋಟಿ ಆಸ್ತಿ ತೆರಿಗೆ!

ಮೇ ತಿಂಗಳೊಳಗಾಗಿ ರು.1,200 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಬೇಕು ಎಂದು ಗುರಿ ನಿಗದಿಪಡಿಸಿಕೊಂಡಿದ್ದ ಬಿಬಿಎಂಪಿ, ಏಪ್ರಿಲ್ ತಿಂಗಳೊಂದರಲ್ಲೇ ರು.631 ಕೋಟಿ ತೆರಿಗೆ ಸಂಗ್ರಹಿಸಿದೆ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಮೇ ತಿಂಗಳೊಳಗಾಗಿ ರು.1,200 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಬೇಕು ಎಂದು ಗುರಿ ನಿಗದಿಪಡಿಸಿಕೊಂಡಿದ್ದ ಬಿಬಿಎಂಪಿ, ಏಪ್ರಿಲ್ ತಿಂಗಳೊಂದರಲ್ಲೇ ರು.631 ಕೋಟಿ ತೆರಿಗೆ ಸಂಗ್ರಹಿಸಿದೆ.

ಶೇ.50ಕ್ಕೂ ಹೆಚ್ಚು ಸಾಧನೆ ಒಂದೇ ತಿಂಗಳಲ್ಲಿ ಮಾಡಿದೆ. 2015-16 ನೇ ಸಾಲಿಗೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ರು.2,900 ಕೋಟಿ ಗುರಿ ಹೊಂದಿರುವ ಬಿಬಿಎಂಪಿಯಲ್ಲಿ ಏಪ್ರಿಲ್‍ನಲ್ಲಿ ಅಧಿಕ ಮೊತ್ತ ಸಂಗ್ರಹಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಏಪ್ರಿಲ್‍ನಲ್ಲಿ ನಗರದಲ್ಲಿ 6,20,270 ಆಸ್ತಿ ಮಾಲೀಕರು ತೆರಿಗೆ ಪಾವತಿಸಿದ್ದು, ರು.631 ಕೋಟಿ ಸಂಗ್ರಹವಾಗಿದೆ. ಕಳೆದ ಸಾಲಿನ ಇದೇ ತಿಂಗಳಲ್ಲಿ 4.53 ಲಕ್ಷ ಆಸ್ತಿ ಮಾಲೀಕರು ರು.406 ಕೋಟಿ ತೆರಿಗೆ ಪಾವತಿಸಿದ್ದರು.

ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ಹೆಚ್ಚುವರಿಯಾಗಿ 2 ಲಕ್ಷ ಆಸ್ತಿ ಮಾಲೀಕರು ರು.225 ಕೋಟಿಗೂ ಅಧಿಕ ಆಸ್ತಿ ತೆರಿಗೆ ಪಾವತಿಸಿದ್ದಾರೆ. ತೆರಿಗೆ ಸಂಗ್ರಹ ಈ ಬಾರಿ ಶೇ.50ರಷ್ಟು ಹೆಚ್ಚಿದೆ. ಆಡಳಿತಾಧಿಕಾರಿ ಹಾಗೂ ಆಯುಕ್ತರ ನೇತೃತ್ವದಲ್ಲಿ ನಡೆದ ಹಲವು ಸಭೆಗಳಲ್ಲಿ ಈ ಬಾರಿ ಆದಾಯ ಸಂಗ್ರಹಕ್ಕೆ ಮೊದಲ ಆದ್ಯತೆ ನೀಡಿ, ಆಸ್ತಿ ತೆರಿಗೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.

ಆನ್‍ಲೈನ್ ಮೂಲಕ ತೆರಿಗೆ ಪಾವತಿಸಲು ವ್ಯವಸ್ಥೆಯಿದ್ದು, ಈ ಬಾರಿ ಹೆಚ್ಚಿನ ಮಂದಿ ಆನ್‍ಲೈನ್ ಸೌಲಭ್ಯ ಬಳಸಿಕೊಂಡಿದ್ದಾರೆ. ಕಚೇರಿಗೆ ಬಂದು ತೆರಿಗೆ ಪಾವತಿಸುವುದು ಸಾರ್ವಜನಿಕರಿಗೆ ಹೊರೆಯಾಗಿದ್ದು, ಆನ್‍ಲೈನ್ ಮೂಲಕವೇ ಪಾವತಿಸಿ ಎಂದು ಆಡಳಿತಾಧಿಕಾರಿ ವಿಜಯ ಭಾಸ್ಕರ್ ಈ ಹಿಂದೆ ಮನವಿ ಮಾಡಿದ್ದರು. ಈ ವರ್ಷ 2.16 ಲಕ್ಷ ಆಸ್ತಿ ಮಾಲೀಕರು ಆನ್‍ಲೈನ್ ಮೂಲಕ ರು.136.27 ಕೋಟಿ ಆಸ್ತಿ ತೆರಿಗೆ ಪಾವತಿಸಿದ್ದು, ಕಳೆದ ವರ್ಷ ಏಪ್ರಿಲ್‍ನಲ್ಲಿ ಆನ್‍ಲೈನ್ ಮೂಲಕ 1,56,905 ಆಸ್ತಿ ಮಾಲೀಕರು ರು.93.1 ಕೋಟಿ ತೆರಿಗೆ ಪಾವತಿಸಿದ್ದರು.

ಕಳೆದ ಸಾಲಿಗೆ ಹೋಲಿಸಿದರೆ ಆನ್‍ಲೈನ್ ಮೂಲಕ ಪಾವತಿಸಿದವರ ಪ್ರಮಾಣ 60 ಸಾವಿರಕ್ಕಿಂತ ಹೆಚ್ಚಿದೆ. ಏ.29ರಂದು ಒಂದೇ ದಿನದಲ್ಲಿ 59,843 ಆಸ್ತಿ ಮಾಲೀಕರು ರು.96.85 ಕೋಟಿ ಆಸ್ತಿ ತೆರಿಗೆ ಪಾವತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com