ಬಿಬಿಎಂಪಿಗೆ ಮೂರು ತಿಂಗಳ ಕಾಲ ಕೆಸಿಡಿಸಿ ಹಸ್ತಾಂತರಿಸಿ: ಹೈಕೋರ್ಟ್ ನಿರ್ದೇಶನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಸೂಚನೆಯಂತೆ ಬೆಂಗಳೂರಿನ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ (ಕೆಸಿಡಿಸಿ)ವನ್ನು ಬಿಬಿಬಿಎಂಪಿಗೆ ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ಬುಧವಾರ ಆದೇಶಿಸಿದೆ...
ಕರ್ನಾಟಕ ಹೈ ಕೋರ್ಟ್
ಕರ್ನಾಟಕ ಹೈ ಕೋರ್ಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಸೂಚನೆಯಂತೆ ಬೆಂಗಳೂರಿನ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ (ಕೆಸಿಡಿಸಿ)ವನ್ನು ಬಿಬಿಬಿಎಂಪಿಗೆ ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ಬುಧವಾರ ಆದೇಶಿಸಿದೆ.

ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಎನ್.ಕುಮಾರ್ ಮತ್ತು ನ್ಯಾ.ಬಿ.ವಿ.ನಾಗರತ್ನ
ಅವರಿದ್ದ ವಿಭಾಗೀಯ ಪೀಠ, ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಏ.22ರಂದು ಸಭೆ ನಡೆಯಿತು. ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆ ಮತ್ತು ಬಿಬಿಎಂಪಿ ವಿಶೇಷ ಆಯುಕ್ತರು ನೀಡಿದ್ದ ಸಲಹೆಗಳನ್ನು ಪರಿಗಣಿಸಿ, ಕೆಸಿಡಿಸಿಯನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಸಿಎಂ ಸೂಚಿಸಿದ್ದರು. ಹೀಗಾಗಿ, ಘನತ್ಯಾಜ್ಯ ಸಂಸ್ಕರಣೆ ಕಾರ್ಯ ಸುಗಮವಾಗಿ ನಡೆಯಲು ಕೆಸಿಡಿಸಿ ಘಟಕವನ್ನು ಮೂರು ತಿಂಗಳ ಕಾಲ ಬಿಬಿಎಂಪಿಗೆ ತಾತ್ಕಾಲಿಕವಾಗಿ ಹಸ್ತಾಂತರಿಸಬೇಕು ಎಂದು ಆದೇಶಿಸಿತು.

ಇದೇ ವೇಳೆ ಕೆಸಿಡಿಸಿ ಘಟಕವನ್ನು ಸೂಕ್ತವಾಗಿ ನಿಭಾಯಿಸದ ಮತ್ತು ವಿಚಾರಣೆಗೆ ಹಾಜರಾದ ಕೆಸಿಡಿಸಿ ಅಧ್ಯಕ್ಷ ಡಾ.ಆನಂದ್ ಕುಮಾರ್ ಅವರ ಕಾರ್ಯವೈಖರಿಗೆ ಅಸಮಾಧಾನವನ್ನು ಕೋರ್ಟ್ ವ್ಯಕ್ತಪಡಿಸಿತು. ಕೆಸಿಡಿಸಿ ಘಟಕ ಸ್ಥಾಪನೆಯೇ ಕಾನೂನು ಬದ್ಧವಾಗಿಲ್ಲ ಎಂದು ಎಚ್‍ಎಸ್‍ಆರ್ ಲೇಔಟ್ ನಿವಾಸಿಗಳು ಕೋರ್ಟ್ ಗಮನಕ್ಕೆ ತಂದರು.

ಅಧ್ಯಕ್ಷರೇ ಯಾರಿಗೂ ಲವ್ ಲೆಟರ್ ನೀಡಬೇಡಿ!

ವಿಚಾರಣೆ ವೇಳೆ ಕೆಸಿಡಿಸಿ ಅಧ್ಯಕ್ಷ ಡಾ.ಆನಂದ್ ಕುಮಾರ್ ಈ ಹಿಂದೆ ಮುಖ್ಯಮಂತ್ರಿಗಳನ್ನು ಓಲೈಸಿ ಬರೆದ ಪತ್ರದ ಕ್ರಮಕ್ಕೆ ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು. ಡಾ.ಆನಂದ ಕುಮಾರ್ ತಮ್ಮ ಕೆಲಸವನ್ನು ಸೂಕ್ತಾವಾಗಿ ನಿಭಾಯಿಸದೆ, ಮುಖ್ಯಮಂತ್ರಿಗಳಿಗೆ ಓಲೈಸಿ (ಲವ್ ಲೆಟರ್)ಪತ್ರ ಬರೆದಿದ್ದಾರೆ. ಇನ್ನು ಮುಂದೆ ಅಧ್ಯಕ್ಷರೂ ಈ ರೀತಿ ಯಾರಿಗೂ ಲವ್ ಲೆಟರ್ ನೀಡದಂತೆ ತಿಳಿಹೇಳಿ. ಇದೇ ವರ್ತನೆ ಪುನರಾವರ್ತಿಸಿದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುವುದು. ಘಟಕದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳೆಲ್ಲರೂ ಮುಖ್ಯಮಂತ್ರಿಗಳ ರೀತಿ ವರ್ತಿಸುತ್ತಿದ್ದಾರೆ. ಇದನ್ನು ಕೋರ್ಟ್ ಸಹಿಸುವುದಿಲ್ಲ ಎಂದು ಪೀಠ ಎಚ್ಚರಿಕೆ ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com