
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚೀನಾ ಪ್ರವಾಸಕ್ಕೆ ತಾವು ಹೋಗುತ್ತಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಆಸಕ್ತಿ ಇರುವ ಮುಖ್ಯಮಂತ್ರಿಗಳು ಪ್ರಧಾನಿ ಜತೆ ಚೀನಾ ಪ್ರವಾಸಕ್ಕೆ ಬರಬಹುದು' ಅಂತ ಕೇಂದ್ರ ಸರ್ಕಾರದಿಂದ ಒಂದು ಪ್ರಸ್ತಾವ ಇದೆಯೇ ಹೊರತು ಅದೇನೂ ಅಧಿಕೃತ ಆಹ್ವಾನ ಅಲ್ಲ. ಪ್ರಧಾನಿ ಪ್ರವಾಸದ ವಿವರಗಳೂ ತಮಗೆ ಗೊತ್ತಿಲ್ಲ. ಅಲ್ಲದೆ ರಾಜ್ಯದಲ್ಲಿ ಗ್ರಾಪಂ ಚುನಾವಣೆಗಳು ನಡೆಯಲಿದ್ದು, ತಾವು ಅದರಲ್ಲಿ ಬ್ಯುಸಿಯಾಗಿರುವುದರಿಂದ ಚೀನಾ ಪ್ರವಾ ಸಕ್ಕೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ಎಚ್‍ಡಿಕೆ ಹೇಳಬೇಕಾ?:
ಬೇರೆ ರಾಜ್ಯಗಳಿಗೆ ಹೋಗಿ ರೈತರ ಸಮಸ್ಯೆ ಕೇಳುತ್ತಿರುವ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ರೈತರ ಸಮಸ್ಯೆ ಕೇಳುತ್ತಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳುವುದಕ್ಕೆ,
ರಾಹುಲ್ ಗಾಂಧಿ ಏನು ಮಾಡಬೇಕು, ಏನು ಮಾಡಬಾರದು ಎಂದು ಕುಮಾರಸ್ವಾಮಿ ಹೇಳಬೇಕೆನ್ರಿ.. ಎಂದು ರೇಗಿದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಎಲ್ಲ ರಾಜ್ಯಗಳಿಗೂ ಹೋಗ್ತಾರೆ, ಕರ್ನಾಟಕಕ್ಕೂ ಬರ್ತಾರೆ. ಅದನ್ನು ಯಾರೂ ಹೇಳಬೇಕಾಗಿಲ್ಲ ಎಂದರು.
ರಾಜ್ಯದ ನಿಗಮ ಮಂಡಳಿಗಳಿಗೆ ಅಧ್ಯಕ್ಷ ನೇಮಕ ಪೂರ್ಣ ಆಗಿಲ್ಲ ಎಂದು ರಾಜ್ಯದ ಕೆಲವು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ ಎನ್ನುವುದು ಸುಳ್ಳು ಎಂದು ಮುಖ್ಯಮಂತ್ರಿ ಹೇಳಿದರು.
Advertisement