ಸಾಮೂಹಿಕ ವಿವಾಹಕ್ಕೆ ಬೆಳ್ಳಿಹಬ್ಬ

ಅಲ್ಲಿ ಅದ್ಧೂರಿ ಇಲ್ಲ, ವೈಭೋಗಕ್ಕೆ ಆಸ್ಪದವೇ ಇಲ್ಲ. ಸಂಪ್ರದಾಯ, ಮಂತ್ರ ಎಂಬುದಿದ್ದರೆ ಅದು ಶರಣತತ್ವ ಮಾತ್ರ. ಹೌದು, ಸುಮಾರು 25 ವರ್ಷಗಳಿಂದ ಸರಳ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಇಂಥದ್ದೊಂದು ಸಾಧನೆ ಮಾಡಿದೆ ಚಿತ್ರದುರ್ಗದ ಮುರುಘಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಿತ್ರದುರ್ಗ: ಅಲ್ಲಿ ಅದ್ಧೂರಿ ಇಲ್ಲ, ವೈಭೋಗಕ್ಕೆ ಆಸ್ಪದವೇ ಇಲ್ಲ. ಸಂಪ್ರದಾಯ, ಮಂತ್ರ ಎಂಬುದಿದ್ದರೆ ಅದು ಶರಣತತ್ವ ಮಾತ್ರ. ಹೌದು, ಸುಮಾರು 25 ವರ್ಷಗಳಿಂದ ಸರಳ ಮತ್ತು
ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಇಂಥದ್ದೊಂದು ಸಾಧನೆ ಮಾಡಿದೆ ಚಿತ್ರದುರ್ಗದ ಮುರುಘಾ ಮಠ.

ಯಾವುದೇ ಮಂತ್ರ, ತಂತ್ರ, ಡಂಬಾಚಾರಗಳನ್ನು ಆಚರಿಸದೇ ಬಸವಾದಿ ಶರಣರ ತತ್ವಗಳನ್ನು ಯಥಾವತ್ತಾಗಿ ಪಾಲನೆ ಮಾಡುವುದು ಈ ಮಠದ ಹೆಗ್ಗಳಿಕೆ. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ, ಈ ಮಠದಲ್ಲಿ ಕಳೆದ 25 ವರ್ಷಗಳಲ್ಲಿ ಆಗಿರುವ ಸಾಮೂಹಿಕ ಜೋಡಿ ವಿವಾಹದ ಸಂಖ್ಯೆ 11,500. ಒಂದು ಮಠ ಇಂಥದ್ದೊಂದು ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂಬುದು ಭಕ್ತರ ಅನಿಸಿಕೆ.

ಪ್ರತಿ ವರ್ಷದ ಈ ಸಾಮೂಹಿಕ ಮದುವೆಗೆ ಸಾಕ್ಷಿಯಾಗುವುದು ಮೇ 5ನೇ ತಾರೀಕು. ಈ ವರ್ಷ ಈ ಸಾಮೂಹಿಕ ಜೋಡಿ ವಿವಾಹಕ್ಕೆ ಬೆಳ್ಳಿ ಹಬ್ಬದ ಸಂಭ್ರಮ. ಜನೋಪಯೋಗಿ ಕಾರ್ಯಗಳ ಮೂಲಕವೇ ಮಠ ಅತಿ ಹೆಚ್ಚು ಭಕ್ತರನ್ನು ಹೊಂದಿದೆ ಎಂಬುದು ಮುರುಘ ರಾಜೇಂದ್ರ ಶ್ರೀ ಮಾತು. ಅಲ್ಲದೆ ಈ ರೀತಿಯ ಸಾಮೂಹಿಕ ವಿವಾಹ ನಡೆಸುತ್ತಿರುವ ಏಕೈಕ ಮಠ ಕೂಡ ಇದೇ ಎಂದೂ ಹೇಳುತ್ತಾರೆ.

ಅಂತರ್ಜಾತಿ ವಿವಾಹಕ್ಕೆ ರು.2 ಲಕ್ಷ
ಈ ಬಾರಿಯ ಬೆಳ್ಳಿ ಹಬ್ಬದ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದವರು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ. ಅಂತರ್ಜಾತಿ ವಿವಾಹಕ್ಕೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲೇ ಸರ್ಕಾರ ಸಹಾಯ ಧನ ನೀಡುತ್ತಿದೆ. ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಪರಿಶಿಷ್ಟ ಜಾತಿ - ಪಂಗಡದ ವಧು - ವರರಿಗೆ ರು.50 ಸಾವಿರ ನೀಡುತ್ತೇವೆ. ಹಾಗೆಯೇ ಅಂತರ್ಜಾತಿ ವಿವಾಹದಲ್ಲಿ ಪಾಲ್ಗೊಂಡವರಿಗೆ ರು.2 ಲಕ್ಷ ನೀಡುತ್ತಿದ್ದೇವೆ ಎಂದರು. ಇಲ್ಲಿ ವಿವಾಹವಾದ ಪರಿಶಿಷ್ಟ ಜಾತಿಯ 99, ಪರಿಶಿಷ್ಟ ಪಂಗಡದ 65 ಜೋಡಿಗಳಿಗೆ ರು.50 ಸಾವಿರ ಹಣ ನೀಡುವುದಾಗಿ ಘೋಷಿಸಿದರು.

ಬೆಳ್ಳಿಹಬ್ಬದ ವಿವಾಹ ಮಹೋತ್ಸವಕ್ಕೆ ಸಹಯೋಗ ನೀಡಿದವರು, ಬಸವ ಕೇಂದ್ರ ಮುರುಘಾಮಠ, ಎಸ್‍ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್, ಡಿ.ಎಸ್. ಮ್ಯಾಕ್ಸ್ ಪ್ರಾಪರ್ಟಿಸ್ ಮತ್ತು ಶಾರದಮ್ಮ ಚಂದ್ರಪ್ಪ ಫೌಂಡೇಷನ್. ಜತೆಗೆ ಸೋಮವಾರ 207 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಉಪಸ್ಥಿತಿ: ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್, ಭಗೀರಥಪೀಠದ ಪುರುಷೋತ್ತಮಾನಂದ ಪುರಿ ಶ್ರೀ, ರಾಜನಹಳ್ಳಿಯ ಪ್ರಸನ್ನ ವಾಲ್ಮೀಕಿ ಶ್ರೀ, ನಿಜಗುಣಾನಂದ ಶ್ರೀ, ಹೆಬ್ಬಾಳಿನ ಮಹಾಂತರುದ್ರ ಶ್ರೀ, ಇಮ್ಮಡಿ ಸಿದ್ಧರಾಮ ಶ್ರೀ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com