ಬೆಂಗಳೂರು ವಿವಿಗೆ ಸೌಲಭ್ಯಗಳ ವೈಕಲ್ಯ

ಅಂಗವಿಕಲರ ಅಧಿ ನಿಯಮದ ಅಧ್ಯಕ್ಷ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಂಗವಿಕಲರಿಗೆ ಪೂರಕವಾದ ಸೌಲಭ್ಯಗಳಿವೆಯೇ ಎಂದುಪರಿಶೀಲಿಸಿದರು. ಈ ಸಭೆಯಲ್ಲಿ ವಿದ್ಯಾರ್ಥಿಗಳಿಂದ ದೂರುಗಳ ಮಹಾಪೂರ ಹರಿದಾಗ ಮೂರು ತಿಂಗಳಲ್ಲಿ ವ್ಯವಸ್ಥೆ ಸರಿಪಡಿಸುವಂತೆ ವಿವಿ...
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ತಿಮ್ಮೇಗೌಡ
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ತಿಮ್ಮೇಗೌಡ

ಬೆಂಗಳೂರು: ಅಂಗವಿಕಲರ ಅಧಿ ನಿಯಮದ ಅಧ್ಯಕ್ಷ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಂಗವಿಕಲರಿಗೆ ಪೂರಕವಾದ ಸೌಲಭ್ಯಗಳಿವೆಯೇ ಎಂದು
ಪರಿಶೀಲಿಸಿದರು. ಈ ಸಭೆಯಲ್ಲಿ ವಿದ್ಯಾರ್ಥಿಗಳಿಂದ ದೂರುಗಳ ಮಹಾಪೂರ ಹರಿದಾಗ ಮೂರು ತಿಂಗಳಲ್ಲಿ ವ್ಯವಸ್ಥೆ ಸರಿಪಡಿಸುವಂತೆ ವಿವಿ ಕುಲಪತಿ ಪ್ರೊ. ತಿಮ್ಮೇಗೌಡರಿಗೆ ತಾಕೀತು ಮಾಡಿದರು.

ಶುಕ್ರವಾರ ಅಧಿನಿಯಮದ ಅಧ್ಯಕ್ಷ ಕೆ.ಸಿ. ರಾಜಣ್ಣ ಪರಿಶೀಲನಾ ಸಭೆಯಲ್ಲಿ ವಿವಿಯಲ್ಲಿ ಪೂರಕ ವ್ಯವಸ್ಥೆಗಳಿಲ್ಲ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಂಗವಿಕಲರಿಗಾಗಿರುವ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿ 90 ದಿನಗಳಲ್ಲಿ ವ್ಯವಸ್ಥೆ ಸರಿಪಡಿಸಬೇಕೆಂದು ತಾಕೀತು ಮಾಡಿದರು. ವಿಶಿಷ್ಟ ಸಾಧನೆ ಮಾಡಿದ ಅಂಗವಿಕಲರಿಗೆ ವಿವಿ ಡಾಕ್ಟರೇಟ್ ಪದವಿ ನೀಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಬೆಂವಿವಿ ಕುಲಪತಿ ಪ್ರೊ. ಬಿ ತಿಮ್ಮೇಗೌಡ ಮಾತನಾಡಿ, ವಿಕಲಚೇತನರಿಗೆ ಕಡಿಮೆ ಸೌಕರ್ಯ ಗಳಿದ್ದು, ಮತ್ತಷ್ಟು ಕೆಲಸಗಳಾಗಬೇಕಿವೆ. ಆ ಕಾಮಗಾರಿಗಳನ್ನು ನಿರ್ದಿಷ್ಟ ಅವಧಿಯಲ್ಲಿ
ಮುಗಿಸಲಾಗುವುದು. ಎಲ್ಲ ಕಟ್ಟಡಗಳಲ್ಲೂ ರ್ಯಾಂಪ್, ಅಂಗವಿಕಲ ಸ್ನೇಹಿ ಶೌಚಾಲಯ ಕಲ್ಪಿಸಬೇಕಿದೆ. ಪ್ರಸ್ತುತ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನೂ ಅಂಗವಿಕಲ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಕಳೆದ ಸಾಲಿನಲ್ಲಿ ಎಇಡಿ ಕೋರ್ಸ್‍ಗೆ ಎನ್‍ಸಿಟಿಇನಲ್ಲಿ ಅಂಗವಿಕಲರಿಗೆ ಅವಕಾಶ ಕಲ್ಪಿಸಲು ಸಾಧ್ಯವಿರಲಿಲ್ಲ, ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಪ್ರೊ. ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಅಂಗವಿಕಲರ ಘಟಕವೊಂದನ್ನು ಆರಂಭಿಸಿದ್ದು, ಅದು ಸಮಸ್ಯೆಗಳಿಗೆ ಕಿವಿಗೊಡಲಿದೆ ಎಂದರು.

ಮಾತಿನ ಚಕಮಕಿ

ಸಭೆಯಲ್ಲಿ ವಿದ್ಯಾರ್ಥಿ ಧನಂಜಯ್ ಬಿಸಿಎಂ ವಸತಿ ನಿಲಯಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಕುರಿತು ಹಲವು ಬಾರಿ ಎಂಜಿನಿಯರ್‍ಗೆ ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಹಿಂದಿನ ಕುಲಪತಿ ಅಂಗವಿಕಲರಿಗಾಗಿ ತ್ರಿಚಕ್ರ ವಾಹನ ನೀಡಿದ್ದರು. ಆದರೆ, ಈಗ ವಾಹನ ನೀಡುತ್ತಿಲ್ಲ, ಅನುದಾನ ಬಿಡುಗಡೆಯಾದರೂ ಅನುಕೂಲ ಕಲ್ಪಿಸುತ್ತಿಲ್ಲ. ಶೌಚಾಲಯ ದುರ್ನಾತದಿಂದ ಕೂಡಿರುತ್ತದೆ. ಗ್ರಂಥಾಲಯಗಳಲ್ಲಿ ಪುಸ್ತಕಗಳೇ ಲಭ್ಯವಾಗುವುದಿಲ್ಲ ಎಂದು ಆರೋಪಿಸಿದರು.

ಅಂಗವಿಕಲರಿಗೆ 3ನೇ ಮಹಡಿಯಲ್ಲಿ ಕೊಠಡಿ ನೀಡುತ್ತಾರೆ. ಯುಜಿಸಿ ನಿಯಮ ಅಂಗವಿಕಲರಿಗೆ ಪೌಷ್ಟಿಕ ಆಹಾರ ನೀಡಬೇಕೆನ್ನುತ್ತದೆ. ಆದರೆ, ಇಲ್ಲಿ ಕಳಪೆ ಗುಣಮಟ್ಟದ ಆಹಾರ ಸೇವಿಸುತ್ತಿದ್ದೇವೆ. ಅಂಗವಿಕಲ ಸಂಶೋಧನಾ ವಿದ್ಯಾರ್ಥಿಗಳಿಗೆ ವರ್ಷಕ್ಕೆ ರು.9,5-00 ಶುಲ್ಕ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ರು.1,500 ಕಟ್ಟಿಸಿಕೊಳ್ಳುತ್ತಾರೆ. ಅಂಗವಿಕಲರಿಗೆ ಉಚಿತ ಊಟ ವಸತಿ ನೀಡಬೇಕು. ಆದರೂ, ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಕುಲಪತಿಗಳು ಗರಂ ಆಗಿ ನೀವೂ ಅಧಿಕಾರಿಗಳೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ಸಿಸಿ ಕ್ಯಾಮೆರಾದಲ್ಲಿ ಎಲ್ಲವೂ ಸೆರೆಯಾಗಿದೆ ಎಂದರು. ವಿದ್ಯಾರ್ಥಿ ಅವರ ನಡವಳಿಕೆಗಳ ಕುರಿತು ನನ್ನ ಬಳಿ ಪುರಾವೆ ಇದೆ ಎಂದು ವಾದಿಸಿದರು. ಆಗ ಅಂಗವಿಕಲರ ಅಧಿನಿಯಮದ ಅಧ್ಯಕ್ಷ ಮಧ್ಯಸ್ಥಿಕೆವಹಿಸಿ ಸಮಸ್ಯೆಗಳನ್ನು ಕುರಿತು ಮನವಿ ನೀಡುವಂತೆ ವಿದ್ಯಾರ್ಥಿಗೆ ಸೂಚಿಸಿ, ವಾತಾವರಣ ತಿಳಿಗೊಳಿಸಿದರು.

ಅಂಗವಿಕಲರ ಹಾಸ್ಟೆಲ್‍ಗೆ ಅರ್ಜಿ ತರಲು ಹೋದಾಗ, ಪ್ರಭಾರಿ ಪ್ರಧಾನ ಕ್ಷೇಮ ಪಾಲಕ ರಾಮಕೃಷ್ಣಯ್ಯ ಕಾಲಿನ ಸಮಸ್ಯೆ ಇರುವವರನ್ನು ಬಹಳ ಹೊತ್ತು ನಿಲ್ಲಿಸಿ, ಜಾತೀಯತೆ ಆಧಾರದ ಮೇಲೆ ಮಾತನಾಡಿದರು. ಹಾಸ್ಟೆಲ್ ನೀಡಲು ಸಿಂಡಿಕೇಟ್ ಅನುಮತಿ ನೀಡಿದ್ದರೂ, ಇವರು ನಕಾರ ವ್ಯಕ್ತಪಡಿಸುತ್ತಾರೆ. ಈ ಕುರಿತು ಆಕ್ಷೇಪಿಸಿದಾಗ, ಅಂಗವೈಕಲ್ಯ ಎತ್ತಿ ಹಿಡಿದು
`ಕುಂಟ' ಎಂಬ ಶಬ್ಧ ಬಳಸಿ ಮನಸ್ಸಿಗೆ ಆಘಾತ ಮಾಡಿದ್ದಾರೆ. ಅವರು ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.

ಎಂ. ಧನಂಜಯ
ಸಂಶೋಧನಾ ವಿದ್ಯಾರ್ಥಿ, ಅರ್ಥಶಾಸ್ತ್ರ ವಿಭಾಗ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com