ನಕ್ಸಲ್ ಆರೋಪದ ಹಿಂದೆ ಎಎನ್ ಎಫ್ ಮತ್ತು ಸರ್ಕಾರ: ವಿಠಲ ಮಲೆಕುಡಿಯ

ನನ್ನ ಮೇಲೆ ನಕ್ಸಲ್ ಹಣೆಪಟ್ಟಿ ಕಟ್ಟಿರುವುದರ ಹಿಂದೆ ನಕ್ಸಲ್ ನಿಗ್ರಹ ದಳ(ಎಎನ್ಎಫ್) ಮತ್ತು ಸರ್ಕಾರದ ಕೈವಾಡವಿದೆ ಎಂದು ನಕ್ಸಲ...
ಪತ್ರಿಕಾಗೋಷ್ಠಿ ನಡೆಸಿದ ಎಂಸಿಜೆ ವಿದ್ಯಾರ್ಥಿ ವಿಠಲ ಮಲೆಕುಡಿಯಾ
ಪತ್ರಿಕಾಗೋಷ್ಠಿ ನಡೆಸಿದ ಎಂಸಿಜೆ ವಿದ್ಯಾರ್ಥಿ ವಿಠಲ ಮಲೆಕುಡಿಯಾ

ಬೆಂಗಳೂರು: ನನ್ನ ಮೇಲೆ ನಕ್ಸಲ್ ಹಣೆಪಟ್ಟಿ ಕಟ್ಟಿರುವುದರ ಹಿಂದೆ ನಕ್ಸಲ್ ನಿಗ್ರಹ ದಳ(ಎಎನ್ಎಫ್) ಮತ್ತು ಸರ್ಕಾರದ ಕೈವಾಡವಿದೆ ಎಂದು ನಕ್ಸಲ ಎಂಬ ಆರೋಪ ಹೊತ್ತಿರುವ ವಿಠಲ ಮಲೆ ಕುಡಿಯ ಗುರುವಾರ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ವಿಠಲ ಮಲೆ ಕುಡಿಯ, ನಾನು ನಕ್ಸಲ್ ಅಲ್ಲ. ಆದರೆ ಸುಳ್ಳು ಆರೋಪದ ಮೇಲೆ ನನ್ನನ್ನು ನಕ್ಸಲ್ ಎಂದು ಕರೆಯಲಾಗುತ್ತಿದೆ ಎಂದಿದ್ದಾರೆ.

ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಆತನ ವಿರುದ್ಧ ನಕ್ಸಲ್ ಮತ್ತು ರಾಜದ್ರೋಹ ಆರೋಪಪಟ್ಟಿ ಸಲ್ಲಿಸಿದೆ. ಸದ್ಯ ಈತ ಗ್ರಾಮ ಪಂಚಾಯಿತಿ ಚುನಾವಣೆಗೆ ಕುತ್ಲೂರಿನ ವಾರ್ಡ್ ನಂ.2 ರಿಂದ ಸ್ಪರ್ಧಿಸಿದ್ದಾನೆ. ಜನಪರ ಹೋರಾಟ ಸಂಘಟನೆಗಳಲ್ಲಿ ಗುರುತಿಸಿಕೊಂಡು ಪೊಲೀಸ್ ಇಲಾಖೆಯಿಂದ ನಕ್ಸಲ್ ಹಣೆಪಟ್ಟಿ ಹೊತ್ತಿದ್ದ ವಿಠಲ ಮಲೆಕುಡಿಯ ನಾರಾವಿ ಗ್ರಾಪಂನ ಕುತ್ಲೂರು ವಾರ್ಡ್‌ನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಮೇ 16ರಂದು ನಾರಾವಿ ಗ್ರಾಪಂ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು.

ನನ್ನ ಮತ್ತು ತಂದೆಯ ವಿರುದ್ಧ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ನಾನು 6ನೇ ಹಾಗೂ ನನ್ನ ತಂದೆ 7ನೇ ಆರೋಪಿಯಾಗಿದ್ದಾರೆ. ನಾವು ನಕ್ಸಲರಲ್ಲ. ನಮ್ಮೂರಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿಲ್ಲ. ಆದರೆ, ನಕ್ಸಲ್ ಚಟುವಟಿಕೆ ನಡೆಯುತ್ತಿದೆ ಎಂದು ಪೊಲೀಸರು ನಿರಂತರವಾಗಿ ದೌರ್ಜನ್ಯವೆಸಗುತ್ತಿದ್ದಾರೆ. 2012ರಲ್ಲಿ ಸುಮಾರು 20-30 ಪೊಲೀಸರು ನಮ್ಮ ಮನೆಗೆ ನುಗ್ಗಿ ತಂದೆಯ ಕಾಲಿಗೆ ಗಾಯ ಮಾಡಿದ್ದಾರೆ. ಅಲ್ಲದೇ, 21 ಸಾವಿರ ಹಣವನ್ನು ದೋಚಿದ್ದಾರೆ. ಆದರೆ, ಈ ಸಂಬಂಧ ಚಾರ್ಜ್ ಶೀಟ್ ನಲ್ಲಿ ಪ್ರಸ್ತಾಪಿಸಿಲ್ಲ. ಭಗತ್ ಸಿಂಗ್ ಸಂಬಂಧಪಟ್ಟ ಪುಸ್ತಕ ಮನೆಯಲ್ಲಿದ್ದ ಕಾರಣಕ್ಕೆ ನಕ್ಸಲ್ ಎಂದು ಸಾಬೀತು ಪಡಿಸಲು ಬಳಸಿಕೊಂಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್ ಸಿಂಗ್ ಪುಸ್ತಕ ಮನೆಯಲ್ಲಿ ಇಟ್ಟಿಕೊಂಡಿದ್ದಕ್ಕೇ ನನ್ನನ್ನು ನಕ್ಸಲ್ ಎಂದು ಬಿಂಬಿಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ವಿಠಲ ಮಲೆ ಕುಡಿಯ ಪ್ರಶ್ನಿಸಿದ್ದಾರೆ.

ಆದಿವಾಸಿಗಳ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈಗಲೂ ಕೂಡ ನಮ್ಮ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ನೀಡುತ್ತಿಲ್ಲ. ಹುಲಿ ಪ್ರಾಂತ್ಯದಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೆವು. ಈ ಹಿನ್ನಲೆಯಲ್ಲಿ ನನ್ನನ್ನು ನಕ್ಸಲ್ ಎಂದು ಸುಳ್ಳು ಆರೋಪ ಹೊರಿಸಿ, ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದರಲ್ಲಿ ಎಎನ್ ಎಫ್ ಮತ್ತು ಸರ್ಕಾರದ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದೇ ಗ್ರಾಮದ ಅಭಿವೃದ್ಧಿಗೋಸ್ಕರ ಹಾಗೂ ಕಸ್ತೂರಿ ರಂಗನ್ ವರದಿ ಪರಿಣಾಮ ವಿರೋಧವಾಗಿ ಸ್ಪರ್ಧಿಸುತ್ತಿದ್ದೇನೆ ಎಂದ ಅವರು, ಯಾವುದೇ ನಕ್ಸಲರ ಜೊತೆ ನನಗೆ ಸಂಪರ್ಕವಿಲ್ಲ. ನಕ್ಸಲ್ ಪ್ಯಾಕೇಜ್ ಆಸೆಗಾಗಿ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ ಎಂದು ವಿಠಲ ಆಪಾದಿಸಿದ್ದಾರೆ.

ಮಂಗಳೂರು ವಿವಿಯಲ್ಲಿ ಎಂಸಿಜೆ ವಿದ್ಯಾರ್ಥಿಯಾಗಿದ್ದ ಅವರು 2012ರ ಮಾ. 3ರಂದು ನಕ್ಸಲ್ ನಿಗ್ರಹದಳದ ಪೊಲೀಸರಿಂದ ಬಂಧನಕ್ಕೊಳಗಾಗಿ ದೇಶಾದ್ಯಂತ ಸುದ್ದಿಯಾಗಿದ್ದರು. ಈ ಪ್ರಕರಣವನ್ನು ಸಿಪಿಐಎಂ ಪಕ್ಷ ಸವಾಲಾಗಿ ಸ್ವೀಕರಿಸಿ ಹೋರಾಟ ನಡೆಸಿತ್ತು. ವಿಠಲ 4 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಕಲಿಕೆ ಜತೆ ಜನಪರ ಹೋರಾಟಗಳ ನೇತೃತ್ವ ವಹಿಸಿದ್ದರು. ಕಳೆದ ಜನವರಿ ಕೊನೆಯಲ್ಲಿ ವಿಠಲ ಮಲೆಕುಡಿಯ ವಿರುದ್ಧ ರಾಜ್ಯ ಸರಕಾರದ ನಿರ್ದೇಶನದಂತೆ ಬಂಟ್ವಾಳ ಎಎಸ್ಪಿಯವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇದು ಮತ್ತೊಂದು ಹಂತದ ಹೋರಾಟಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com