
ಬೆಂಗಳೂರು: ಕೆರೆ ಒತ್ತುವರಿಯಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳುವುದರ ಬದಲು ಅವರ ರಕ್ಷಣೆಗೆ ನಿಂತಿದೆ ಎಂದು ಲೋಕಸತ್ತಾ ಪಕ್ಷ ಆರೋಪಿಸಿದೆ.
ಕೆರೆ ಒತ್ತುವರಿಯನ್ನು ಸರ್ಕಾರ ತೆರವುಗೊಳಿಸುತ್ತಿರುವುದು ಸ್ವಾಗತಾರ್ಹ. ಆದರೆ, ಒತ್ತುವರಿಗೆ ಕಾರಣರಾದ ಅಧಿಕಾರಿಗಳು ಮತ್ತು ಮೂಲ ಒತ್ತುವರಿದಾರರನ್ನು ಇದುವರೆಗೂ ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಕೇವಲ ನೆಪ ಮಾತ್ರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದೆ ಹೊರತು, ಯಾವುದೇ ಕಾರ್ಯರೂಪಕ್ಕೆ ತಂದಿಲ್ಲ ಎಂದು ಲೋಕಸತ್ತಾ ಪಕ್ಷದ ರಾಜ್ಯಾಧ್ಯಕ್ಷ ಎನ್.ಎಸ್.ಮುಕುಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ದಂಧೆ ಬಡವರನ್ನು ವಂಚಿಸಿದೆ. ಕೆರೆಯನ್ನು ಒತ್ತುವರಿ ಮಾಡಿ, ಲೇಔಟ್ ನಿರ್ಮಿಸಿ ಮಾರಾಟ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕೆರೆ ಒತ್ತುವರಿ ಕಾರ್ಯಾಚರಣೆಯಲ್ಲಿ ಮನೆಗಳನ್ನು ಕಳೆದುಕೊಂಡು ಅನೇಕರು ವಂಚಿತರಾಗಿದ್ದಾರೆ. ಆದರೆ, ಇದಕ್ಕೆ ಮೂಲ ಕಾರಣದವರು ಸದ್ದಿಲ್ಲದೇ ಜಾರಿಕೊಂಡಿದ್ದಾರೆ. ಈ ದಂಧೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿದ್ದು, ಇವರ ಬೆಂಬಲಕ್ಕೆ ಸರ್ಕಾರ ಮತ್ತು ವಿರೋಧ ಪಕ್ಷಗಳು ನಿಂತಿವೆ ಎಂದು ಆಪಾದಿಸಿದ್ದಾರೆ.
ಸರ್ಕಾರ ಕೂಡಲೇ ಎಲ್ಲಾ ಬಲಾಡ್ಯ ಒತ್ತುವರಿದಾರರ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಪ್ರಸ್ತುತ ಕೆರೆ ಒತ್ತುವರಿಯಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶನ ಅಥವಾ ಮನೆ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಲೋಕಸತ್ತಾ ಪಕ್ಷದ ರಾಜ್ಯಾಧ್ಯಕ್ಷರಾದ ಎನ್.ಎಸ್ ಮುಕುಂದ, ಕಾರ್ಯದರ್ಶಿ ದೀಪಕ್ ಸಿ.ಎನ್. ಮತ್ತು ಟೆಡ್ ಕೆ.ದಾಸ್ ಉಪಸ್ಥಿತರಿದ್ದರು.
Advertisement