
ಬೆಂಗಳೂರು: ಅತ್ಯಾಚಾರದ ವಿರುದ್ಧ ಲೋಕಸಭೆಯಲ್ಲಿ ಕಠಿಣ ಕಾಯ್ದೆ ಜಾರಿಗೆ ತರಬೇಕು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೆ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಕರ್ನಾಟಕ ಮೂಲದ ದಾದಿ ಅರುಣಾ ಶಾನಬಾಗ್ ಗೆ ಕನ್ನಡ ಚಳುವಳಿ ವಾಟಾಳ್ ಪಕ್ಷ ಬೆಂಗಳೂರಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು. ನಂತರ ಮಾತನಾಡಿದ ವಾಟಾಳ್ ನಾಗರಾಜ್, 42 ವರ್ಷಗಳ ಕಾಲ ಕೋಮದಲ್ಲಿದ್ದ ಅರುಣಾ ಶಾನಬಾಗ್ ಸಾವು ದೇಶವೇ ತಲೆ ತಗ್ಗಿಸುವಂತಾಗಿದೆ. ಅತ್ಯಾಚಾರವನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಲೋಕಸಭೆಯಲ್ಲಿ ಕಠಿಣ ಕಾಯ್ದೆ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅರುಣಾ ಶಾನಬಾಗ್ ಹೆಸರಿನಲ್ಲಿ ರಾಜ್ಯ ಸರ್ಕಾರ ರು.1 ಕೋಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಇಡಬೇಕು. ಈ ಪ್ರಶಸ್ತಿಯನ್ನು ಅತ್ಯಾಚಾರ ವಿರುದ್ಧ ಹೋರಾಟ ಮಾಡಿದ ವೀರ ಮಹಿಳೆಯರಿಗೆ ಮೀಸಲಿಡಬೇಕು ಎಂದ ಅವರು, ಹೊನ್ನಾವರದ ಹಳದಿಪುರದಲ್ಲಿ ಇರುವ ಅವರ ಮನೆ ದೊಡ್ಡ ಸ್ಮಾರಕವಾಗಬೇಕು ಎಂದು ಹೇಳಿದ್ದಾರೆ.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಾಟಾಳ್ ನಾಗರಾಜ್, ಸಾ.ರಾ ಗೋವಿಂದ್ ಮತ್ತು ಇನ್ನಿತರ ಕನ್ನಡ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
Advertisement