
ಬೆಂಗಳೂರು: ಎಚ್ ಐವಿ/ಏಡ್ಸ್ ಸೋಂಕಿತರ ಹೆಚ್ಚಿನ ಚಿಕಿತ್ಸೆಗಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 'ಎಆರ್ ಟಿ ಪ್ಲಸ್' ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಸೋಮವಾರ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ಆಯೋಜಿಸಿದ್ದ ಎಚ್ ಐವಿ/ಏಡ್ಸ್ ತಡೆ ಮತ್ತು ನಿಯಂತ್ರಣದಲ್ಲಿ ಮಾಧ್ಯಮದ ಪಾತ್ರ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಆಯ್ದೆ ವೈದ್ಯಕೀಯ ಕಾಲೇಜುಗಳಲ್ಲಿ ಎಚ್ ಐವಿ ಸೋಂಕಿತರಿಗೆ ಎಆರ್ ಟಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚು ಸೋಂಕು ಹೊಂದಿರುವವರಿಗೆ ಮತ್ತಷ್ಟು ಚಿಕಿತ್ಸೆ ನೀಡಲು ಎಆರ್ ಟಿ ಪ್ಲಸ್ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಪ್ರಸ್ತುತ ಎಆರ್ ಟಿ ಪ್ಲಸ್ ಕೇಂದ್ರವನ್ನು ಬಾಗಲಕೋಟೆಯಲ್ಲಿ ಸ್ಥಾಪಿಸಲಾಗಿದ್ದು, ಎಚ್ ಐವಿ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ, ಕಲಬುರಗಿ, ಉಡುಪಿ, ಕೊಳ್ಳೆಗಾಲ, ಬಳ್ಳಾರಿ, ಶಿರಸಿಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ 2,68,836 ಮಂದಿ ಸೋಂಕು ಪೀಡಿತರಾಗಿದ್ದು, ಅವರಲ್ಲಿ 1,18,480 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಾಜದಲ್ಲಿ ಎಚ್ ಐವಿ ಸೋಂಕಿತರೂ ಕೂಡ ಉತ್ತಮ ರೀತಿಯಲ್ಲಿ ಬದುಕು ನಡೆಸಲೆಂದು ಆರೋಗ್ಯ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈ ಸಂಬಂಧ ಕೆಳ ಮಟ್ಟದಲ್ಲಿರುವ ಎಚ್ ಐವಿ ಸೋಂಕಿತರ ಮಾಹಿತಿ ಪಡೆದಿದ್ದು, ಅವರಿಗೆ ಬೇಕಾದ ಸೌಲಭ್ಯ ಒದಗಿಸಲಾಗುತ್ತಿದೆ ಎಂದ ಅವರು, ಸೋಂಕು ಪೀಡಿತರ ಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.
ಎಚ್ ಐವಿ ಕಾನೂನು ಜಾರಿಯಾದರೆ ಅನುಕೂಲ
ಕಳೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಎಚ್ ಐವಿ ಮಸೂದೆಗೆ ಅನುಮೋದನೆ ನೀಡಿದ್ದು, ಆಸ್ಕರ್ ಫರ್ನಾಂಡಿಸ್ ನೇತೃತ್ವದ ಸಂಸತ್ ಸ್ಥಾಯಿ ಸಮತಿಯ ಮುಂದೆ ಮಸೂದೆ ಬಂದಿದೆ. ಈ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಈ ಮಸೂದೆ ಜಾರಿಯಾದರೆ, ಸೋಂಕಿತರಿಗೆ ಅನುಕೂಲವಾಗಲಿದೆ, ಕಾನೂನು ಪ್ರಕಾರವಾಗಿ ಎಲ್ಲಾ ರೀತಿಯ ಸೌಲಭ್ಯಗಳು ಸಿಗಲಿವೆ ಎಂದು ಖಾದರ್ ಹೇಳಿದ್ದಾರೆ.
Advertisement