ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಅನುಮತಿ: 2 ವಾರದಲ್ಲಿ ಅರ್ಜಿ ಪರಿಗಣಿಸಲು ಹೈ ಸೂಚನೆ

ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಎರಡು ವಾರದೊಳಗೆ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು:  ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಎರಡು ವಾರದೊಳಗೆ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗೆ ಅನುಮತಿ ನೀಡುವಂತೆ 2008ರಲ್ಲೇ ನ್ಯಾಯಾಲಯ ಆದೇಶಿಸಿದೆ. ಆದರೆ, ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅನುದಾನ ರಹಿತ ಆಡಳಿತ ಮಂಡಳಿ ಸೇರಿ ಹಲವಾರು ಶಾಲೆಗಳು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದವು.

ವಿಚಾರಣೆ ನಡೆಸಿದ ನ್ಯಾ.ಆನಂದ ಭೈರಾರೆಡ್ಡಿ ಮತ್ತು ನ್ಯಾ.ಬಿ.ವೀರಪ್ಪ ಅವರಿದ್ದ ರಜಾಕಾಲದ ವಿಭಾಗೀಯ ಪೀಠ, ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳನ್ನು ಜೂನ್ 8ರೊಳಗೆ ಪರಿಗಣಿಸಿ, ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ಅನುಮತಿ ನೀಡುವಂತೆ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, `ಅನುಮತಿ ನೀಡುವ ವಿಷಯದಲ್ಲಿ ಸರ್ಕಾರ ಈವರೆಗೂ ನ್ಯಾಯಾಲಯದ ಆದೇಶ ಪಾಲಿಸಿಲ್ಲ. ಇದು ನ್ಯಾಯಾಂಗ ನಿಂದನೆಯಾಗಿದ್ದು, ಇದು ಸುಧಾರಣೆ ಆಗಬೇಕಿದ್ದಲ್ಲಿ ತಪ್ಪಿತಸ್ಥ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕು' ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ಪೀಠ, ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಭಾಷಾ ಮಾಧ್ಯಮ ವಿಚಾರದಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ವಿರುದಟಛಿ ತೀರ್ಪು ನೀಡಿದೆ. ಹೈಕೋರ್ಟ್ ಸಹ ಅರ್ಜಿದಾರರ ಸಂಸ್ಥೆಗಳಿಗೆ
ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಅನುಮತಿ ನೀಡಲು ನಿರ್ದೇಶಿಸಿದೆ.

ಹೀಗಿದ್ದರೂ ಅನುಮತಿ ನೀಡಲು ಸರ್ಕಾರಕ್ಕೆ ಏನು ಸಮಸ್ಯೆ? ಈ ವಿಚಾರದಲ್ಲಿ ಏಕೆ ವಿಳಂಬ ಮಾಡಲಾಗುತ್ತಿದೆ? ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, `ಅರ್ಜಿದಾರರ ಸಂಸ್ಥೆಗಳಿಗೆ ಅನುಮತಿ ನೀಡಲು ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ. ಅನುಮತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕಿದ್ದು, ಶಾಲೆಗಳ ಅಸ್ತಿತ್ವದಲ್ಲಿರುವ ಕುರಿತು ಸರ್ಕಾರ ಮಾಹಿತಿ ಕಲೆ ಹಾಕುತ್ತಿದೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಗ್ರಾಪಂ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ನ್ಯಾಯಾಲಯ 15 ದಿನಗಳ ಕಾಲಾವಕಾಶ ನೀಡಿದರೆ ಶಾಲೆಗಳ ಅರ್ಜಿಗಳನ್ನು ಪರಿಗಣಿಸಿ ಅನುಮತಿ ನೀಡಲಾಗುವುದು' ಎಂದರು ಪೀಠಕ್ಕೆ ಭರವಸೆ ನೀಡಿದರು. ಸರ್ಕಾರಿ ವಕೀಲರ ಈ ಹೇಳಿಕೆ ಪರಿಗಣಿಸಿದ ವಿಭಾಗೀಯ ಪೀಠ, ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭಿಸಲು ಅನುಮತಿ ಕೋರಿ ಶಾಲೆಗಳು ಸಲ್ಲಿಸಿರುವ ಅರ್ಜಿಗಳನ್ನು 15 ದಿನಗಳ ಒಳಗಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ಜೂನ್ 8ಕ್ಕೆ ವಿಚಾರಣೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com