
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಲ್ಕರೆಯಲ್ಲಿನ ಪಶು ವೈದ್ಯಕೀಯ ಆಸ್ಪತ್ರೆಯನ್ನು ನಗರದ ಹೊರಭಾಗಕ್ಕೆ ಸ್ಥಳಾಂತರಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.
ಪಶು ಆಸ್ಪತ್ರೆ ಸ್ಥಳಾಂತರ ಪ್ರಶ್ನಿಸಿ ಸ್ಥಳೀಯ ರಾದ ಪುಷ್ಪ ಸೇರಿ ಇಪತ್ತು ಜನರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಎಚ್.ಬಿಳ್ಳಪ್ಪ ಮತ್ತು ನ್ಯಾ.ಬಿ. ವೀರಪ್ಪ ಅವರಿದ್ದ ರಜಾಕಾಲದ ವಿಭಾಗೀಯ ಪೀಠ, ರಾಜ್ಯ ಪಶು ಇಲಾಖೆ ಹಾಗೂ ಕಲ್ಕರೆ ಪಶು ವೈದ್ಯಕೀಯ ಆಸ್ಪತ್ರೆ ಹಾಗೂ ಬಿಬಿಎಂಪಿಗೆ ಸಹ ನೋಟಿಸ್ ಜಾರಿ ಮಾಡಿದೆ. ಕಲ್ಕರೆಯ ಪಶು ವೈದ್ಯಕೀಯ ಆಸ್ಪತ್ರೆ ಸುತ್ತಮುತ್ತಲ 8 ಕಿ.ಮೀ. ವ್ಯಾಪ್ತಿಗೆ ಲಭ್ಯವಿರುವ ಆಸ್ಪತ್ರೆಯಾಗಿದೆ. ಈ ಪ್ರದೇಶದಲ್ಲಿ 8 ಸಾವಿರದಷ್ಟು ಪಶುಗಳಿವೆ. ಇದರ ವ್ಯಾಪ್ತಿಯಲ್ಲಿ
ಮೂರು ಹಾಲು ಸಹಕಾರ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ಲಭ್ಯವಿರುವ ಏಕೈಕ ಪಶು ಆಸ್ಪತ್ರೆಯನ್ನು ಕೂಡ ಸ್ಥಳಾಂತರಿಸಿದರೆ ಜನಸಾಮಾನ್ಯರು ತೊಂದರೆಗೆ ಸಿಲು ಕುತ್ತಾರೆ. ಆದ್ದರಿಂದ ಅದರ ಸ್ಥಳಾಂತರ ವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾ ರರು ಕೋರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಒಟ್ಟು 56ಪಶು ಕೇಂದ್ರಗಳ ಪೈಕಿ 31 ಆಸ್ಪತ್ರೆಗಳನ್ನು ನಗರದಿಂದ ಹೊರಭಾಗಕ್ಕೆ ಸ್ಥಳಾಂತರ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ, ಆಸ್ಪತ್ರೆಗಳನ್ನು ನಗರದ ಹೊರಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಗೊಂಡ ಆಸ್ಪತ್ರೆಯಲ್ಲಿ ಕಲ್ಕರೆಯ ಆಸ್ಪತ್ರೆ ಕೂಡ ಒಂದಾಗಿದ್ದು, ಈ ಆಸ್ಪತ್ರೆ ಸ್ಥಳಾಂತರಕ್ಕೆ ಅವಕಾಶ ನೀಡಬಾರದೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇನ್ನೊಂದೆಡೆ ಪ್ರತ್ಯೇಕ ಅರ್ಜಿಯೊಂದರ ವಿಚಾರಣೆ ನಡೆಸಿದ ಇದೇ ನ್ಯಾಯಪೀಠ, ಸ್ಥಳಾಂತರಗೊಂಡ ಪಶುವೈದ್ಯ ಆಸ್ಪತ್ರೆಗಳಲ್ಲಿ ಜೂನ್ 15ರೊಳಗೆ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಶುವೈದ್ಯ ಆಸ್ಪತ್ರೆಗಳ ವೈದ್ಯರು ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದೆ. ಈ ಹಿಂದೆ ಹೈಕೋರ್ಟ್ ವಿಭಾಗೀಯಪೀಠ, ಜೂನ್ 1 ರ ಒಳಗಾಗಿ ಸ್ಥಳಾಂತರಗೊಂಡ ಪಶುವೈದ್ಯ ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ವೈದ್ಯರಿಗೆ ಗಡುವು ವಿಧಿಸಿತ್ತು. ಈ ಗಡುವು ವಿಸ್ತರಿಸುವಂತೆ ವೈದ್ಯರು ಅರ್ಜಿ ಸಲ್ಲಿಸಿದ್ದರು.
Advertisement