
ಬೆಂಗಳೂರು: ಬೇಳೆ ಕಾಳು ದರ ಹೆಚ್ಚಳದಿಂದ ನವರಾತ್ರಿಗೆ ಬೇಳೆ ಕಾಳುಗಳಿಂದ ಸಿಹಿ ತಿನಿಸುಗಳನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರಗೊಂಡಿದ್ದೀರಾ? ಹಾಗಿದ್ದರೆ ಚಿಂತೆ ಬಿಡಿ. ದೀಪಾವಳಿ ವೇಳೆಗೆ ಅವುಗಳ ದರ ಇಳಿಕೆಯಾಗಲಿದೆ. ಹೀಗೆಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂತಸದ ಸುದ್ದಿ ನೀಡಿದೆ. ಇದರ ಜತೆಗೆ ವಿವಿಧ ಜಿಲ್ಲೆಗಳಲ್ಲಿ ಇಲಾಖೆ ಹಾಗೂ ಜಿಲ್ಲಾಡಳಿತ ದಾಳಿ ನಡೆಸಿ ವಶಪಡಿಸಿಕೊಂಡಿರುವ ಅಕ್ರಮ ಬೇಳೆ ಕಾಳುಗಳನ್ನು ಹರಾಜು ಹಾಕಲು ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಈ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ನಡೆಸಲಾಗಿರುವ 1,308 ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂದಾಜು 153 ಕೋಟಿ ರೂಪಾಯಿ ಮೊತ್ತದ 2.35 ಲಕ್ಷ ಕ್ವಿಂಟಾಲ್ ಬೇಳೆ ಕಾಳನ್ನು ಈ ವಾರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
ಭಾನುವಾರ ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ಹಾಗೂ ವಿವಿಧ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಆಹಾರ ಸಚಿವ ದಿನೇಶ್ ಗುಂಡೂರಾವ್, ನಂತರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.
ಹರಾಜು ಇಲಾಖೆಯೊಂದಿಗೆ ಚರ್ಚಿಸಿದ್ದು, ಎಪಿಎಂಸಿ ಇ-ಟ್ರೇಡಿಂಗ್ ಮುಖಾಂತರ ಸರ್ಕಾರದ ವಶದಲ್ಲಿರುವ ಬೇಳೆಕಾಳುಗಳನ್ನು ಹಾರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈಗಿನಿಂದಲೇ ಪ್ರಕ್ರಿಯೆ ಆರಂಭಿಸಲು ಎಲ್ಲ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.ನ.4ರಿಂದ 6ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರಮುಖವಾಗಿ ತೊಗರಿ ಬೇಳೆ, ಉದ್ದಿನ ಬೇಳೆ, ತೊಗರಿ ಕಾಳನ್ನು ನವೆಂಬರ್ 6ರೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಹೆಸರು ಬೇಳೆ, ಕಡಲೆಕಾಳು ಸೇರಿ ಉಳಿದ ಬೇಳೆಕಾಳು ನ.9ರೊಳಗಾಗಿ ಮಾರುಕಟ್ಟೆಗೆ ಸರಬರಾಜಾಗಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ವಿತರಣೆ ಕಡ್ಡಾಯ: ನ.4ರಿಂದ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಬೇಳೆ ಖರೀದಿಸಿದವರು ಒಂದೇ ದಿನದಲ್ಲಿ ಸರಕನ್ನು ದಾಸ್ತಾನಿನಿಂದ ತೆಗೆದುಕೊಳ್ಳಬೇಕು ಮತ್ತು ಮುಂದಿನ ಮೂರು ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಜೊತೆಗೆ ಇಲ್ಲಿ ಖರೀದಿಯಾಗುವ ಬೇಳೆಕಾಳು ಹೊರರಾಜ್ಯಗಳಿಗೆ ಮಾರಾಟ ಮಾಡದಂತೆ ನಿಯಮ ಹಾಕಲಾಗುತ್ತಿದೆ. ಇಡೀ ಪ್ರಕ್ರಿಯೆಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಎಂದು ಸಚಿವರು ಭರವಸೆ ನೀಡಿದರು. ಒಂದೊಮ್ಮೆ ಈ ಪ್ರಕ್ರಿಯೆಯಲ್ಲಿ ಖರೀದಿಸಿದವರು ಮತ್ತೆ ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶವಿಲ್ಲ.ಕೂಡಲೇ ವಿತರಿಸದೇ ಹೋದರೆ ಸರ್ಕಾರ ಪುನಃ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಪಾರದರ್ಶಕತೆ: ಎಪಿಎಂಸಿಯಲ್ಲಿ ನಡೆಯುವ ಈ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಸರ್ಕಾರಿ ಸಂಸ್ಥೆಗಳಿಗೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ ಎಂದರು.
ಅಕ್ರಮ ದಾಸ್ತಾನಿನ ಮೇಲೆ ದಾಳಿ ನಿಲ್ಲಿಸುವುದಿಲ್ಲ. ಹೋಲ್‍ಸೆಲ್ ಮತ್ತು ರಿಟೇಲ್ ವರ್ತಕರು ಬೇಳೆಕಾಳು ದಾಸ್ತಾನು ಮಾಡಿಕೊಳ್ಳಲು ಕಡ್ಡಾಯವಾಗಿ ಲೈಸೆಲ್ಸ್ ಪಡೆದುಕೊಳ್ಳಬೇಕು. ಸಗಟು ವರ್ತಕರು 2 ಸಾವಿರ ಕ್ವಿಂಟಾಲ್‍ವರೆಗೆ,ಚಿಲ್ಲರೆ ಮಾರಾಟಗಾರರು 5ರಿಂದ 50 ಕ್ವಿಂಟಾಲ್‍ವರೆಗೆ ದಾಸ್ತಾನು ಇಡಬಹುದು. ಆದರೆ, ಇವರೆಲ್ಲ ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.
Advertisement