ಕವಿವಿಗೆ ಮತ್ತೊಂದು ಕಂಟಕ: ಹಿಂದಿನ ಹಗರಣದ ಬಗ್ಗೆ ವಿವರಣೆ ಕೇಳಿದ ರಾಜ್ಯಪಾಲರು

ಯುಜಿಸಿಯಿಂದ ಮಾನ್ಯತೆ ಕಳೆದುಕೊಂಡು ಸುದ್ದಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಈಗ ರಾಜ್ಯಪಾಲರಿಂದ ಕಂಟಕ ಎದುರಾಗಿದೆ.
ರಾಜ್ಯಪಾಲ ವಜುಭಾಯ್ ವಾಲ
ರಾಜ್ಯಪಾಲ ವಜುಭಾಯ್ ವಾಲ

ಬೆಂಗಳೂರು: ಯುಜಿಸಿಯಿಂದ ಮಾನ್ಯತೆ ಕಳೆದುಕೊಂಡು ಸುದ್ದಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿ(ಕೆಎಸ್ಒಯು)ಗೆ ಈಗ ರಾಜ್ಯಪಾಲರಿಂದ ಕಂಟಕ ಎದುರಾಗಿದೆ.
ಈ ಹಿಂದೆ ವಿವಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು 15 ದಿನಗಳಲ್ಲಿ ವಿವರಣೆ ನೀಡಬೇಕೆಂದು ಆದೇಶಿಸಿದ್ದು, ನೀಡದೇ ಇದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಂಗಳವಾರ ಸಂಜೆ ವಿವಿಯ ಕುಲಸಚಿವ ಪ್ರೊ.ಪಿ.ಎಸ್ ನಾಯಕ್ ಅವರನ್ನು ಕರೆಸಿಕೊಂಡು ಮುಚ್ಚಿದ ಲಕೋಟೆಯಲ್ಲಿ ಆದೇಶ ನೀಡಿದ್ದಾರೆ. ಲಕೋಟೆ ವಿವೀಯ ಕುಲಪತಿ ಪ್ರೊ.ಎಂ.ಜಿ ಕೃಷ್ಣನ್ ಅವರಿಗೆ ತಲುಪಿದೆ.
ಮುಕ್ತ ವಿವಿಯಲ್ಲಿ ನಡೆದಿರುವ ಭಾರೀ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನ್ಯಾ.ಕೆ.ಭಕ್ತವತ್ಸಲಂ ಏಕವ್ಯಕ್ತಿ ಸಮಿತಿಯನ್ನು ವಿಚಾರಣೆಗೆ ನೇಮಿಸಿದ್ದರು. ಸಮಗ್ರ ತನಿಖೆ ನಡೆಸಿರುವ ಭಕ್ತವತ್ಸಲಂ ಅವರು ಕಳೆದ 20 ದಿನಗಳ ಹಿಂದೆಯೇ ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದರು. ರಾಜ್ಯಪಾಲರು ಈ ವರದಿಯನ್ನು ತಮ್ಮ ಆಪ್ತ ಕಾನೂನು ಸಲಹೆಗಾರರಿಂದ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಒಂದು ವೇಳೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಪ್ಪಿತಸ್ಥರ ವಿರುದ್ಧ ಯಾವುದೇ ರಾಜಿ ಮಾಡಿಕೊಳ್ಳದೇ ಕ್ರಮ ಕೈಗೊಂಡಲ್ಲಿ ಭಾರಿ ಸುದ್ದಿಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com