ಎತ್ತಿನ ಹೊಳೆ ವಿಚಾರದಲ್ಲಿ ನಿರ್ಲಕ್ಷ್ಯ: ಸಚಿವ ಖಾದರ್ ಗೆ ಘೇರಾವ್

ಯು.ಟಿ. ಖಾದರ್(ಸಂಗ್ರಹ ಚಿತ್ರ)
ಯು.ಟಿ. ಖಾದರ್(ಸಂಗ್ರಹ ಚಿತ್ರ)

ಬೆಂಗಳೂರು:ಎತ್ತಿನಹೊಳೆ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ  ಮಾಡುತ್ತಿದೆ ಎಂದು ಎಂದು ಆರೋಪಿಸಿ ಎತ್ತಿನಹೊಳೆ ಶಾಶ್ವತ ನೀರಾವರಿ ಯೋಜನೆ  ಹೋರಾಟಗಾರರು ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ  ಮುತ್ತಿಗೆ ಹಾಕಿದರು.
ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಯಲ್ಲಿ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ರಾಷ್ಟ್ರೀಯ ಹೆದ್ದಾರಿ 7ರ ಮೂಲಕ ವಾಪಸ್ ಆಗುತ್ತಿದ್ದ ಸಚಿವರ ಕಾರಿಗೆ ಅಡ್ಡ ಹಾಕಿದ ಹೋರಾಟಗಾರರು, ದಾಹದಿಂದ ತತ್ತರಿಸಿರುವ ಈ ಭಾಗದ ಜನತೆಗೆ ನೀರು ನೀಡಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹೋರಾಟ ನಡೆಯುತ್ತಿರುವ ಕುರಿತು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸಚಿವ ಖಾದರ್ ಹೇಳುತ್ತಿದ್ದಂತೆ ಕೆರಳಿದ ಪ್ರತಿಭಟನಾಕಾರರು, ಕಳೆದ ೪೫ ದಿನಗಳಿಂದ ಹೋರಾಟ ನಡೆಯುತ್ತಿದೆ. ಜಿಲ್ಲೆಯಲ್ಲಿ ಬಹುತೇಕ ನಿಮ್ಮದೇ ಪಕ್ಷದ ಶಾಸಕರಿದ್ದಾರೆ. ಹಿಂದೆ ಎತ್ತಿನಹೊಳೆ ಯೋಜನೆ ಉದ್ಘಾಟಿಸಿದ ಸಂಸದರೂ ಕಾಂಗ್ರೆಸ್‍ನವರೇ ಆಗಿದ್ದಾರೆ. ಗುಪ್ತಚರ ಇಲಾಖೆ ನಿಮ್ಮದೇ ಅಧೀನದಲ್ಲಿದ್ದರೂ ಹೋರಾಟದ ಮಾಹಿತಿ ನಿಮಗೆ ಸಿಗದಿರುವುದು ವಿಪರ್ಯಾಸ ಎಂದರು.
ಈ ಭಾಗಕ್ಕೆ ಕುಡಿಯುವ ನೀರು ಮಾತ್ರವಲ್ಲ, ವ್ಯವಸಾಯಕ್ಕೂ ನೀರಿನ ಅಗತ್ಯವಿದೆ. ಈ ಭಾಗದ ಕೆರೆಗಳನ್ನು ತುಂಬುವ ಕೆಲಸ ಸಮಗ್ರ ನೀರಾವರಿಯಿಂದ ಮಾತ್ರ ಸಾಧ್ಯವಿದ್ದು, ಈ ಕುರಿತು ಸರ್ಕಾರ ಚಿಂತನೆ ನಡೆಸಬೇಕು ಎಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಈ ಹೋರಾಟದ ಮುಖಂಡರನ್ನು ಸಿಎಂ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವರ ಹತ್ತಿರ
ಕರೆದೊಯ್ದು ಚರ್ಚೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದರು.
ಅರ್ಧ ಗಂಟೆ ಬಿಡಲಿಲ್ಲ: ಸಚಿವ ಖಾದರ್ ಕಾರಿಗೆ ಘೇರಾವ್ ಹಾಕಿದ ಪ್ರತಿಭಟನಾಕಾರರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ನಿಲ್ಲಿಸಿದರು. ಹೋರಾಟಗಾರರ ಎಲ್ಲ ಪ್ರಶ್ನೆಗಳಿಗೂ ಸಾವಧಾನವಾಗಿ ಉತ್ತರಿಸಿದ ಖಾದರ್, ತುರ್ತಾಗಿ ಹೋಗಬೇಕಿದೆ ಎಂದು ಹೋರಾಟಗಾರ ಬಳಿ ಮನವಿ ಮಾಡಿಕೊಂಡರು. ಬಳಿಕ ಪ್ರತಿಭಟನೆ ಹಿಂಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com