ದಲಿತೆ ಅಡುಗೆ ಮಾಡಿದ್ದು ತಿನ್ನಲ್ಲ ಎಂದು ವಿದ್ಯಾರ್ಥಿಗಳು ಬಿಸಿಯೂಟವನ್ನೇ ಬಿಟ್ಟರು!

ಕಗ್ಗನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹೈಯರ್ ಪ್ರೈಮರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ರಾಧಮ್ಮ ಬಿಸಿಯೂಟ ಹಾಜರಿ ಪುಸ್ತಕದಲ್ಲಿ ಇವತ್ತು ಯಾರೂ ಊಟ ಮಾಡಿಲ್ಲ...
ರಾಧಮ್ಮ
ರಾಧಮ್ಮ
ಕೋಲಾರ:  ಕೋಲಾರ ಜಿಲ್ಲೆಯ ಕಗ್ಗನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹೈಯರ್ ಪ್ರೈಮರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ರಾಧಮ್ಮ ಬಿಸಿಯೂಟ ಹಾಜರಿ ಪುಸ್ತಕದಲ್ಲಿ ಇವತ್ತು ಯಾರೂ ಊಟ ಮಾಡಿಲ್ಲ ಎಂದು ವರದಿ ಬರೆಯುತ್ತಾರೆ. ಕಳೆದ ಐದು ತಿಂಗಳಿನಿಂದ ರಾಧಮ್ಮ ಇದೇ ಒಂದು ವಾಕ್ಯವನ್ನು ಬರೆಯುತ್ತಿದ್ದಾರೆ! 
ಇದೀಗ ಆ ಶಾಲೆಯ ಮಕ್ಕಳ್ಯಾರೂ ಶಾಲೆಯಲ್ಲಿ ಕೊಡುವ ಮಧ್ಯಾಹ್ನದ ಬಿಸಿಯೂಟವನ್ನು ಮಾಡುವುದಿಲ್ಲ .ಇದಕ್ಕೆ ಕಾರಣ ಏನು ಗೊತ್ತಾ? ರಾಧಮ್ಮ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಎಂಬುದು!
2014 ಜನವರಿಯಲ್ಲಿ ಒಂದನೇ ತರಗತಿಯಿಂದ 8 ನೇ ತರಗತಿಯವರೆಗಿರುವ 118 ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡುತ್ತಿದ್ದರು. 2014 ಫೆಬ್ರವರಿಯಲ್ಲಿ ರಾಧಮ್ಮ ಅಡುಗೆಯವಳಾಗಿ ನೇಮಕಗೊಂಡಾಗ 100 ವಿದ್ಯಾರ್ಥಿಗಳು ಬಿಸಿಯೂಟವನ್ನು ಬಿಟ್ಟರು. ಇನ್ನುಳಿದಿದ್ದು 18 ಮಕ್ಕಳು, ಅದರಲ್ಲಿಯೂ ರಾಧಮ್ಮ ಅಡುಗೆ ಮಾಡಿದರೆ ನಮ್ಮ ಮಕ್ಕಳು ಊಟ ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳ ಹೆತ್ತವರು ಶಾಲೆಯವರಿಗೆ ಹೇಳಿದ್ದಾರೆ.
ರಾಧಮ್ಮನ ಮನೆಯಲ್ಲಿರುವ ಕುಟುಂಬದ ಸದಸ್ಯರ ಸಂಖ್ಯೆ 7. ರಾಧಮ್ಮನಿಗೆ ತಿಂಗಳಿಗೆ ಸಿಗುವ 1,700 ರು. ಸಂಬಳದಲ್ಲೇ ಮನೆಯ ಖರ್ಚು ವೆಚ್ಚಗಳನ್ನು ಸರಿತೂಗಿಸಬೇಕು.
ಕಗ್ಗನ ಹಳ್ಳಿಯೆಂಬ ಪುಟ್ಟ ಗ್ರಾಮದಲ್ಲಿ 101 ಕುಟುಂಬಗಳಿದ್ದು, ಇಲ್ಲಿ 452 ಜನರು ವಾಸವಾಗಿದ್ದಾರೆ. ಇಲ್ಲಿ ವಾಸಿಸುವ ಜನರಲ್ಲಿ ಶೇ. 40 ರಷ್ಟು ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಅದೇ ವೇಳೆ ಶೇ. 18.14 ರಷ್ಟು ಮಂದಿ ರಾಧಮ್ಮನಂತೆ ದಲಿತರು. ಇನ್ನುಳಿದವರು ಒಬಿಸಿ ಕುರುಬರು ಮತ್ತು ಒಕ್ಕಲಿಗರು.
ಜನಪ್ರತಿನಿಧಿಗಳು, ಅಧಿಕಾರಿಗಳು ಒತ್ತಾಯ ಮಾಡಿದರೂ ಇಲ್ಲಿನ ಜನರು ಮಕ್ಕಳನ್ನು ಶಾಲೆಗೆ ಕಳಿಸಲು ನಿರಾಕರಿಸುತ್ತಿದ್ದಾರೆ. ನಮಗೆ ಅವರ ವರ್ತನೆ ಅರ್ಥವಾಗುತ್ತಿಲ್ಲ. ಇದೀಗ ನಾವು ಈ ಗ್ರಾಮದಲ್ಲಿ ಬಿಸಿಯೂಟ ಯೋಜನೆಯನ್ನು ರದ್ದು ಪಡಿಸಲು ತೀರ್ಮಾನಿಸಿದ್ದೇವೆ ಅಂತಾರೆ ಮಳಬಾಗಿಲು ಬ್ಲಾಕ್ ಶಿಕ್ಷಣ ಅಧಿಕಾರಿ ಎನ್ ದೇವರಾಜ್.
ಶಾಲೆಯಲ್ಲಿ ಈ ರೀತಿ ಆಗುತ್ತಿರುವುದಕ್ಕೆ ಗ್ರಾಮದ ಜನರ ರಾಜಕಾರಣವೇ  ಕಾರಣ. 2014 ಜೂನ್ ನಲ್ಲಿ 118 ಇದ್ದ ವಿದ್ಯಾರ್ಥಿಗಳ ಸಂಖ್ಯೆ 58ಕ್ಕೆ ಕುಸಿಯಿತು. ಜೂನ್ 2015ರ ವೇಳೆ ಅದು 18 ಆಯ್ತು. ಹೆತ್ತವರು ಶಾಲೆಗೆ ಬಂದು ಟ್ರಾನ್ಸ್ ಫರ್ ಸರ್ಟಿಫಿಕೇಟ್ ಕೇಳ್ತಾರೆ. ಅವರನ್ನು ಮನವೊಲಿಸಲು ಯತ್ನಿಸಿದರೆ ನನಗೇ ಬೈತಾರೆ ಎಂದು ಹೇಳುತ್ತಿದ್ದಾರೆ ಶಾಲೆಯ ಮುಖ್ಯೋಪಾಧ್ಯಯ ವೈ.ವಿ ವೆಂಕಟಾಚಲಪತಿ.
ಇಲ್ಲಿಂದ ಟಿಸಿ ತೆಗೆದುಕೊಂಡು ಪಕ್ಕದ ಗ್ರಾಮ ವಡ್ಡಹಳ್ಳಿ ಮತ್ತು ನಂಗಲಿಯಲ್ಲಿರುವ ಶಾಲೆಗೆ ಸೇರುತ್ತಿದ್ದಾರೆ.  ಕರ್ನಾಟಕ ಸರ್ಕಾರದ ನಿಯಮಾನುಸಾರ ಶಾಲೆಯಲ್ಲಿ ಮಕ್ಕಳ ಸಂಖ್ಯೆ 10 ಕ್ಕಿಂತ ಕಡಿಮೆಯಿದ್ದರೆ ಆ ಶಾಲೆ ಮುಚ್ಚಬೇಕಾಗುತ್ತದೆ.
ಶಾಲೆಯಲ್ಲಿ ಮಕ್ಕಳ ಸಂಖ್ಯೆ 118 ಇರುವಾಗ ರಾಧಮ್ಮನಿಗೆ ಅಡುಗೆ ಮಾಡಲು ಸಹಾಯಕ್ಕಾಗಿ ಸಹಾಯಕಿಯೊಬ್ಬಳಿದ್ದಳು. ಈಗ ಅಲ್ಲಿ ಉಳಿದಿರುವುದು ರಾಧಮ್ಮ ಮಾತ್ರ.
ನಾನು ಶಾಲೆಗೆ ಅಡುಗೆಯವಳಾಗಿ ಸೇರಿದಾಗ 58 ಮಕ್ಕಳು ಬಿಸಿಯೂಟ ಮಾಡುತ್ತಿದ್ದರು. ಅದರಲ್ಲಿ 51 ಮಕ್ಕಳ ಹೆತ್ತವರು ಬಲವಂತವಾಗಿ ಬಿಸಿಯೂಟ ಮಾಡಲೇಬಾರದೆಂದು ಮಕ್ಕಳಿಗೆ ತಾಕೀತು ಮಾಡಿದರು. ಇನ್ನುಳಿದ ಏಳು ಮಂದಿ ಈ ವರ್ಷ ಊಟ ಬಿಟ್ಟರು.
ಗ್ರಾಮದಲ್ಲಿರುವ ಮೇಲ್ಜಾತಿಯವರ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳು ಊಟ ಬಿಡುತ್ತಿದ್ದಾರೆ.  ನಾನು ತಯಾರಿಸಿದ ಅಡುಗೆಯನ್ನು ತಿನ್ನಲು ಯಾರೂ ತಯಾರಿಲ್ಲ. ನನ್ನದೇ ಜಾತಿಯ ಮಕ್ಕಳು ಕೂಡಾ ಊಟ ಬಿಡುವಂತೆ ಮಾಡಲಾಗುತ್ತಿದೆ ಎಂದು ರಾಧಮ್ಮ ಹೇಳುತ್ತಾರೆ.
 ಶಾಲೆಯಲ್ಲಿ ಕೊಡುವ ಬಿಸಿಯೂಟವನ್ನು ಮಾಡಬೇಡ ಎಂದು ಮನೆಯಲ್ಲಿ ಹೇಳಿದ್ದಾರೆ ಅಂತಾನೆ ಕಗ್ಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ನಾಲ್ಕನೇ ತರಗತಿಯ ವಿದ್ಯಾರ್ಥಿ. 
 ಶಿಕ್ಷಣ ಪ್ರಮಾಣ  ಶೇ. 66.75 ಇರುವ ಕಗ್ಗನ ಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಚನ್ನರಾಯಪ್ಪ ಹೇಳಿದ್ದು: ನನ್ನ ಸಂಬಂಧಿಯನ್ನೂ ಆ ಶಾಲೆಯಿಂದ ತೆಗೆದು ಇನ್ನೊಂದು ಶಾಲೆಗೆ ಸೇರಿಸಿದ್ದೀನಿ. ದಲಿತೆ ಅಡುಗೆಯಳನ್ನು ನೇಮಕ ಮಾಡಿದ್ದಕ್ಕಾಗಿ ಗ್ರಾಮದ ಜನರು ಅಸಮಾಧಾನಗೊಂಡಿದ್ದಾರೆ.
ರಾಧಮ್ಮನನ್ನು ನೇಮಕ ಮಾಡಿದ್ದು ಗ್ರಾಮದವರಿಗೆ ಇಷ್ಟವಿಲ್ಲ ಅಂತಾರೆ ಅಲ್ಲಿನ ಮೇಲ್ಜಾತಿಯ  ಬಾಬುರೆಡ್ಡಿ.
ನನ್ನ ಕುಟುಂಬವೂ ಸೇರಿದಂತೆ ನಾಲ್ಕು ಕುಟುಂಬಗಳಿಗೆ ಗ್ರಾಮದಲ್ಲಿ ಬಹಿಷ್ಕಾರ ಹೂಡಲಾಗಿದೆ ಅಂತಾರೆ ದಲಿತ ಎಂ. ನಾಗಭೂಷಣ. ಬಹಿಷ್ಕಾರಕ್ಕೊಳಗಾದ ಕುಟುಂಬಗಳಲ್ಲಿ ರಾಧಮ್ಮನ ಕುಟುಂಬವೂ ಇದೆ. ಕೆಲವು ಜನರ ಗುಂಪು ನಮಗೆ ನೀರು ಮತ್ತು ಇನ್ನಿತರ ವಸ್ತುಗಳನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ. ನಮ್ಮಂಥಾ ದಲಿತರ ಜತೆ ಯಾರಾದರೂ ಸಂವಹನ ನಡೆಸಿದರೆ ಅಂಥವರಿಗೆ ರು. 501 ದಂಡ ವಿಧಿಸಲಾಗುವುದು ಎಂದು ಗ್ರಾಮದವರು ಘೋಷಿಸಿದ್ದಾರೆ. ಈ ಬಗ್ಗೆ ನಾನು ಕೇಸು ದಾಖಲಿಸಿದ್ದು, 8 ಮಂದಿಯ ಬಂಧನವೂ ಆಗಿದೆ.
ನಮ್ಮ ಶಾಲೆಯ ಮಕ್ಕಳು ಆಟದಲ್ಲೂ ಪಾಠದಲ್ಲೂ ಜಾಣರಾಗಿದ್ದರು. ರಾಧಮ್ಮಳನ್ನು ಅಡುಗೆಯವಳಾಗಿ ನೇಮಕ ಮಾಡಿದ್ದೇ ತಡ, ಶಾಲೆಯ ಚಿತ್ರಣವೇ ಬದಲಾಯಿತು ಎಂದು ಶಾಲಾಭಿವೃದ್ಧಿ ಮತ್ತು ನಿರೀಕ್ಷಣಾ ಸಮಿತಿಯ ಮುಖ್ಯಸ್ಥ ಸಿ. ತಿಮ್ಮಪ್ಪ ಹೇಳಿದ್ದಾರೆ. ಆದಾಗ್ಯೂ,  ದಲಿತೆಯೊಬ್ಬಳು ಅಡುಗೆ ಮಾಡಿದ್ದನ್ನು ತಿನ್ನುವುದಕ್ಕೆ ಯಾರು ತಾನೆ ಒಪ್ಪುತ್ತಾರೆ? ಶಾಲೆಯ ಬಗ್ಗೆ ಯೋಚಿಸಿದರೆ ಬೇಜಾರಾಗುತ್ತದೆ ಅಂತಾರೆ ತಿಮ್ಮಪ್ಪ.
ಇಲ್ಲಿ ದಲಿತ ಮಹಿಳೆಯೊಬ್ಬಳು ಅಡುಗೆ ಮಾಡಿದ್ದನ್ನು ತಿನ್ನಬಾರದೆಂದು ಮಕ್ಕಳಿಗೆ ಹೇಳಲಾಗುತ್ತಿದೆ. ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯುವ ಮಕ್ಕಳಲ್ಲಿ ಜಾತಿ ಮತ ಧರ್ಮಗಳ ವಿಷ ಬೀಜವನ್ನು ಬಿತ್ತಲಾಗುತ್ತಿದೆ ಎಂದಾದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ? 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com