ಒಳ ಮೀಸಲು ಸಂಬಂಧ ಸದಾಶಿವ ಆಯೋಗ ರಚಿಸಿದ್ದೇ ತಪ್ಪು: ಸಂಪುಟ ಸಭೆಯಲ್ಲಿ ಸಚಿವರ ಆಕ್ಷೇಪ

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲು ವ್ಯವಸ್ಥೆ ಕಲ್ಪಿಸುವುದಕ್ಕಾಗಿ ನ್ಯಾ. ಎ.ಜೆ. ಸದಾಶಿವ ನೇತೃತ್ವದ ಸಮಿತಿ ನೀಡಿದ್ದ ವರದಿ ಶೈಥ್ಯಾಗಾರಕ್ಕೆ ಕಳುಹಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ
Updated on

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲು ವ್ಯವಸ್ಥೆ ಕಲ್ಪಿಸುವುದಕ್ಕಾಗಿ ನ್ಯಾ. ಎ.ಜೆ. ಸದಾಶಿವ ನೇತೃತ್ವದ ಸಮಿತಿ ನೀಡಿದ್ದ ವರದಿ ಜಾರಿ ಸಂಬಂಧ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ತಾಂತ್ರಿಕ ಕಾರಣ ಹಿನ್ನೆಲೆಯಲ್ಲಿ ವರದಿಯನ್ನು ಶೈಥ್ಯಾಗಾರಕ್ಕೆ ಕಳುಹಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.

ಕಳೆದೆರಡು ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದರೂ ಸಾಧಕ-ಬಾಧಕದ ಬಗ್ಗೆ ಚರ್ಚೆ ನಡೆದಿರಲಿಲ್ಲ. ಆದರೆ ಇಂದಿನ ಸಭೆಯಲ್ಲಿ ಸಚಿವರು ವ್ಯಾಪಕವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದು, ತಾಂತ್ರಿಕ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವೇ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಒಳ ಮೀಸಲು ವಿಚಾರ ಸಂಬಂಧ ಸದಾಶಿವ ಆಯೋಗ ರಚನೆ ಮಾಡಿದ್ದೇ ತಪ್ಪು ಎಂದು ಕೆಲ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದು, ವರದಿ ತಯಾರಿಸುವಾಗ ಇದ್ದ ಜನಸಂಖ್ಯೆ ಮತ್ತು 2011ರ ಜನಗಣತಿಯಲ್ಲಿ ಉಲ್ಲೇಖವಾಗಿರುವ ಪರಿಶಿಷ್ಟ ಜಾತಿಗಳ ಸಂಖ್ಯ ಮಧ್ಯೆ ವ್ಯತ್ಯಾಸವಿದೆ. ಈ ತಾಂತ್ರಿಕ ವಿಚಾರ ಮೊದಲು ಬಗೆಹರಿಯಬೇಕು. ಜತೆಗೆ ರಾಜ್ಯ ಸರ್ಕಾರ ನಡೆಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಇನ್ನು ಕೆಲವೇ ದಿನಗಳಲ್ಲಿ ಪ್ರಕಟವಾಗುತ್ತಿದೆ. ಈ ವರದಿಯಲ್ಲಿರುವ ಮಾಹಿತಿ ಹಾಗೂ ಸದಾಶಿವ ಆಯೋಗದ ವರದಿಯ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

2ನೇ ಶನಿವಾರ ರಜೆ ರದ್ದಿಗೆ ಪ್ರಸ್ತಾಪ 2016ನೇ ಸಾಲಿನ ಸಾರ್ವತ್ರಿಕ ರಜೆಗಳಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈಗ ಜಾರಿಯಲ್ಲಿರುವ 2ನೇ ಶನಿವಾರ ರಜೆ ಪದಟಛಿತಿ ಕೈ ಬಿಡುವ ವಿಚಾರದಲ್ಲಿ ಸುದೀರ್ಘ ಚರ್ಚೆ ನಡೆದಿದೆ. ನೂತನ ವರ್ಷದಲ್ಲಿ ಭಾನುವಾರ ಹಾಗೂ ಎರಡನೇ ಶನಿವಾರ ಹೊರತು ಪಡಿಸಿ 22 ಸಾರ್ವತ್ರಿಕ ರಜೆಗಳನ್ನು ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಆದರೆ ಗೌರಿ ಹಬ್ಬಕ್ಕೆ ಸರ್ಕಾರಿ ರಜೆ
ನೀಡುವುದು ಹಾಗೂ ಎರಡನೇ ಶನಿವಾರ ರಜೆ ಪದ್ಧತಿ ಬದಲಿಸುವಂತೆ ಕಾನೂನು ಸಚಿವ ಜಯಚಂದ್ರ ನೀಡಿದ್ದ ಸಲಹೆಯನ್ನು ಸಂಪುಟ ಸಭೆ ಒಪ್ಪಿಕೊಂಡಿಲ್ಲ.

ಮತ್ತೆ ಮೌಢ್ಯ ನಿಷೇಧ ಕಾಯ್ದೆ ಪ್ರಸ್ತಾಪ ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೊಳಿಸುವ ವಿಚಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ಚರ್ಚೆ ನಡೆದಿದೆ. ಬದಲಾದ ಪರಿಸ್ಥಿತಿಯಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಸಾರ್ವಜನಿಕ ಆಗ್ರಹ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನ್ಯಾ. ಶಿವರಾಜ್ ಪಾಟೀಲ್ ಮೊದಲಾದವರ ಸಲಹೆ ತೆಗೆದುಕೊಂಡು ವಿಧೇಯಕ ರೂಪಿಸುವ ಬಗ್ಗೆ ಚರ್ಚೆಯಾಗಿದೆ.

ಸಚಿವ ಸಂಪುಟದ ಇತರ ಕೆಲವು ಪ್ರಮುಖ ನಿರ್ಧಾರಗಳು:

ಗ್ರಾಮ ಸ್ವರಾಜ್-ಪಂಚಾಯತ್ ರಾಜ್: ಎಲ್ಲದಕ್ಕಿಂತ ಮುಖ್ಯವಾಗಿ ಶಾಸಕ ರಮೇಶ್ ಕುಮಾರ್ ನೇತೃತ್ವದ ಸಮಿತಿ ನೀಡಿದ್ದ ಪಂಚಾಯಿತ್ ರಾಜ್ ಬಲವರ್ಧನೆ ವಿಧೇಯಕವನ್ನು ಕಾಯ್ದೆ ರೂಪದಲ್ಲಿ ಈ ಬಾರಿಯ ಅಧಿವೇಶನದಲ್ಲಿ ಮಂಡಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ರಮೇಶ್ ಕುಮಾರ್ ಸಮಿತಿ ಶಿಫಾರಸು ಮಾಡಿದ್ದ 80 ಅಂಶಗಳ ಜತೆಗೆ ಇನ್ನೂ ಕೆಲ ವಿಚಾರಗಳನ್ನು ಸೇರಿಸಲಾಗಿದೆ. ವರದಿಗೆ ವಿಧೇಯಕದ ಸ್ವರೂಪ ನೀಡಲಾಗಿದ್ದು, ಗ್ರಾಮ ಸ್ವರಾಜ್- ಪಂಚಾಯಿತ್ ರಾಜ್ ತಿದ್ದುಪಡಿ ವಿಧೇಯಕ ಎಂದು ಹೆಸರಿಸಲಾಗುತ್ತದೆ.

ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ 5 ವರ್ಷ ಅಧಿಕಾರ ನಿಗದಿ, 5 ವರ್ಷದ ನಂತರ ಕ್ಷೇತ್ರ ಪುನರ್ ವಿಂಗಡಣೆ ನಡೆಸುವುದು, ಅವಿಶ್ವಾಸ ನಿರ್ಣಯ ಮಂಡನೆಗೆ ಗಡುವು ನಿಗದಿ ಸೇರಿದಂತೆ ಹಲವು ಅಂಶಗಳಿಗೆ ಒಪ್ಪಿಗೆ ನೀಡಲಾಗಿದೆ. ವರದಿಯಲ್ಲಿ ಪ್ರಸ್ತಾಪಿಸಿದ್ದ ವಾರ್ಡ್ ಸಭೆ, ಗ್ರಾಮ ಸಭೆ ಜತೆಗೆ ಹ್ಯಾಬೀಟೇಟ್ ಸಭೆ ಎಂಬ ಹೊಸ ವಿಚಾರ ಸೇರಿಸಲಾಗಿದೆ.
ಸಂಪುಟ ಉಪ ಸಮಿತಿ: ಕಲ್ಲಿದ್ದಲು, ಕಬ್ಬಿಣದ ಅದಿರು, ಬಾಕಸೈಟ್ ಹೊರತುಪಡಿಸಿ  ಸುಮಾರು 29 ಖನಿಜಗಳನ್ನು ಕೇಂದ್ರ ಸರ್ಕಾರದ ರಾಜ್ಯದ ಪಟ್ಟಿಗೆ ಬಿಟ್ಟಿದ್ದು, ಇವುಗಳನ್ನು ಹರಾಜು ಮೂಲಕ ಮಾರಾಟ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಇದರಲ್ಲಿ ಮರಳು ಮತ್ತು ಎಂ-ಸ್ಯಾಂಡ್ ಕೂಡಾ ಸೇರಿದ್ದು, ಈ ಬಗ್ಗೆ ಅಧ್ಯಯನ ನಡೆಸಲು ಜಯಚಂದ್ರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲು ಒಪ್ಪಿಗೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com