
ಬೆಂಗಳೂರು: ಅವಿದ್ಯಾವಂತರು, ಗ್ರಾಮೀಣ ಪ್ರದೇಶದ ಜನರಿಗಿಂತ ನಗರ ಪ್ರದೇಶದ ಜನರು, ವಿದ್ಯಾವಂತರು ಹಾಗೂ ರಾಜಕಾರಣಿಗಳಿಂದ ಭ್ರಷ್ಟಾಚಾರ ಹೆಚ್ಚುತ್ತಿದೆ. ಮನುಷ್ಯನಿಗೆ ಬರುವ ಕ್ಯಾನ್ಸರ್ ನಂತೆಂಯೇ ಸಮಾಜಕ್ಕೆ ಅಂಟಿರುವ ಭ್ರಷ್ಟಾಚಾರವೆಂಬ ಕ್ಯಾನ್ಸರ್‍ಅನ್ನೂ ಹೊಡೆದೋಡಿಸ ಬೇಕು ಎಂದು ರಾಜ್ಯಪಾಲ ವಿ.ಆರ್. ವಾಲಾ ಹೇಳಿದರು.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಏರ್ಪಡಿಸಿದ್ದ ಬಾಯಿ ಕ್ಯಾನ್ಸರ್ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ ಅವರು, ``ಎಷ್ಟೇ ಕಾನೂನುಗಳಿದ್ದರೂ ಸಾರ್ವಜನಿಕರ ಸ್ಪಂದನೆ ದೊರೆಯದಿದ್ದಲ್ಲಿ ಪ್ರಯೋಜನವಿಲ್ಲ. ನಮ್ಮಲ್ಲಿ ಕಾನೂನಿಗಳಿವೆಯಾದರೂ ಸರಿಯಾಗಿ ಪಾಲನೆಯಾಗುತ್ತಿಲ್ಲ,'' ಎಂದು ಕಳವಳ ವ್ಯಕ್ತಪಡಿಸಿದರು. ``ಹಲವು ವರ್ಷಗಳ ಹಿಂದೆ ಕ್ಯಾನ್ಸರ್ ಬಂದರೆ `ಕ್ಯಾನ್ಸಲ್' ಎಂಬ ಭಾವನೆ ಇತ್ತು.
ಆದರೆ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‍ಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಆರಂಭದ ಹಂತದಲ್ಲಿಯೇ ಕಾಯಿಲೆ ಪತ್ತೆ ಹಚ್ಚಿದರೆ ಗುಣಮುಖರಾಗಬಹುದು. ತಂಬಾಕು ಸೇವನೆಯಿಂದ ಪುರುಷರಷ್ಟೇ ಅಲ್ಲ, ಮಹಿಳೆಯರು ಕೂಡ ಕ್ಯಾನ್ಸರ್ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಪ್ರತಿ ವರ್ಷ ದೇಶದಲ್ಲಿ 29 ಲಕ್ಷ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು ಆ ಪೈಕಿ ಶೇ.40 ರಷ್ಟು ಬಾಯಿ ಕ್ಯಾನ್ಸರ್ ಆಗಿರುವುದು ಆತಂಕಕಾರಿ,''ಎಂದರು.
ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ಕೆ.ಬಿ. ಲಿಂಗೇಗೌಡ ಮಾತನಾಡಿ, ``ತಮ್ಮ ಆಸ್ಪತ್ರೆಯಲ್ಲಿ ಕ್ಯಾನ್ಸರ್‍ಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಕ್ಯಾನ್ಸರ್ ಬರದಂತೆ ತಡೆಗಟ್ಟಲು ಬೇಕಾದ ಜಾಗೃತಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ,'' ಎಂದರು. ವೈದ್ಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಮಾತನಾಡಿದರು. ಕಿದ್ವಾಯಿ ಆಸ್ಪತ್ರೆಯ ಡಾ. ಕೆ.ಎಸ್. ಸಬಿತಾ ಉಪಸ್ಥಿತರಿದ್ದರು.
Advertisement