ಸಂಸದ ಪ್ರತಾಪ್ ಸಿಂಹ ಕುರುಬರ ಕ್ಷಮೆಯಾಚಿಸಲು ಆಗ್ರಹ

ಹಾಲುಮತ ಸಮಾಜದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಕ್ಷಮೆಯಾಚಿಸ ಬೇಕೆಂದು ಹಾಲುಮತ ಮಹಾಸಭಾ ಆಗ್ರಹಿಸಿದೆ.
ಸಂಸದ ಪ್ರತಾಪ ಸಿಂಹ
ಸಂಸದ ಪ್ರತಾಪ ಸಿಂಹ

ಬೆಂಗಳೂರು: ಹಾಲುಮತ ಸಮಾಜದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಕ್ಷಮೆಯಾಚಿಸ ಬೇಕೆಂದು ಹಾಲುಮತ ಮಹಾಸಭಾ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಹಾಸಭಾ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹಾಗೂ ಸಂಚಾಲಕ ರಾಜು ಮೌರ್ಯ ದಾವಣಗೆರೆ ಅವರು, ಸಂಸದ ಪ್ರತಾಪಸಿಂಹ ಅವರು ಇತ್ತೀಚೆಗೆ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ `ಟಿಪ್ಪು ಸುಲ್ತಾನ್ ಕುರುಬರನ್ನು ಕೊಂದಿದ್ದರೆ, ಟಿಪ್ಪು ಜಯಂತಿ ಆಚರಿಸುತ್ತಿದ್ದರೇ' ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ, ಇದಕ್ಕೆ ಸಮಾಜ ಖಂಡನೆ ವ್ಯಕ್ತಪಡಿಸಿದೆ ಎಂದು ತಿಳಿಸಿದೆ.
ಈ ಹಿಂದೆಯೂ ಭಗವದ್ಗೀತೆ ವಿಷಯದಲ್ಲಿ ಯಾವುದೋ ಸಮುದಾಯವನ್ನು ಹಂದಿಗೆ ಹೋಲಿಸಿದ್ದರು. ಒಬ್ಬ ಜನಪ್ರತಿನಿಧಿಯಾಗಿ ಈ ರೀತಿಯ ಹೇಳಿಕೆ ನೀಡುವುದು ಶೋಭೆ ತರುವ ವಿಷಯವಲ್ಲ, ಇತ್ತೀಚೆಗಷ್ಟೇ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ ಅವರು, ಸಾರ್ವಜನಿಕ ಸೇವೆ ಮಾಡುವತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದೆ. ಯಾರದೋ ಒಲೈಕೆಗೆ ಇಂತಹ ಹೇಳಿಕೆಗಳನ್ನು ನೀಡುವ ಕುಚೇಷ್ಟೆಗಳನ್ನು ನಿಲ್ಲಿಸಿ, ಜನಪ್ರತಿನಿಧಿಯಾಗಿ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಬಿಟ್ಟು, ಸಾಮರಸ್ಯ ಮೂಡಿಸಲಿ.
ಕುರುಬರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರೆ ಸಮಾಜವು ಸಹಿಸುವುದಿಲ್ಲ. ಅತಿಯಾದ ಉದ್ಧಟನಕ್ಕೆ ಜನರೇ ಉತ್ತರಿಸಲಿದ್ದಾರೆ. ಅದೆಲ್ಲಕ್ಕಿಂತ ಮೊದಲು ಹಾಲುಮತ ಸಮಾಜದ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com