ಬೆಂಗಳೂರು: ರಾಜಕೀಯ ರಣಾಂಗಣಕ್ಕೆ ವೇದಿಕೆಯಾಗುವ ವಿಧಾನ ಮಂಡಲದ 10 ದಿನಗಳ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದೆ.
ಬೆಳಗ್ಗೆ 11 ಗಂಟೆಗೆ ವಿಧಾನಸಭೆಹಾಗೂ ಮಧ್ಯಾಹ್ನ 12.15ಕ್ಕೆ ವಿಧಾನಪರಿಷತ್ತು ಅಧಿವೇಶನ ಪ್ರಾರಂಭವಾಗಲಿವೆ. ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದ ನಂತರ ವಿಧಾನಸಭೆ ಮಂಗಳವಾರಕ್ಕೆ ಮುಂದೂಡಲ್ಪಡುತ್ತದೆ.
ಪರಿಷತ್‍ನಲ್ಲಿ ಶ್ರದ್ಧಾಂಜಲಿ ಸಲ್ಲಿಕೆ ತರುವಾಯ ಪ್ರತಿಪಕ್ಷ ಬಿಜೆಪಿಯು ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಲು ಉದ್ದೇಶಿಸಿದೆ. ಈ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿಯುವುದು ಬಹುತೇಕ ಖಚಿತ.
ಸರ್ಕಾರ ಚರ್ಚೆಗೆ ಸಿದ್ಧವಾಗದೇ ಇದ್ದಲ್ಲಿ ಮೊದಲ ದಿನವೇ ಸರ್ಕಾರದ ವಿರುದ್ಧ ಹೋರಾಟದ ಹಾದಿ ತುಳಿಯುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ. ಸೋಮವಾರ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ಮುಂದಿನ ಹೆಜ್ಜೆ ಬಗ್ಗೆ ಮುಖಂಡರು ತೀರ್ಮಾನಿಸುವರು.
ಪೊಲೀಸ್ ಅಧಿಕಾರಿಗಳ ಮೇಲಿನ ಹಲ್ಲೆ, ಜೈಲಲ್ಲಿ ಕೊಲೆ, ಅತ್ಯಾಚಾರ ಪ್ರಕರಣ, ಸರಗಳ್ಳತನದ ವಿಚಾರವಾಗಿಯೂ ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ ಸಿದ್ಧವಾಗಿದೆ. ರೈತರ ಆತ್ಮ ಹತ್ಯೆವಿಚಾರದಲ್ಲಿ ಸರ್ಕಾರದ ಸ್ಪಂದನೆ, ಸಚಿವ ಆಂಜನೇಯ ಅವ್ಯವಹಾರ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.