ಟ್ಯೂಷನ್ ಕಷ್ಟವಾಗಿದ್ದಕ್ಕೆ ಕತ್ತು ಕುಯ್ದುಕೊಂಡ!

ಗಣಿತ ವಿಷಯದಲ್ಲಿ ಹಿಂದುಳಿದಿದ್ದ ಬಾಲಕನೊಬ್ಬ ಟ್ಯೂಷನ್‍ಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಗಣಿತ ವಿಷಯದಲ್ಲಿ ಹಿಂದುಳಿದಿದ್ದ ಬಾಲಕನೊಬ್ಬ ಟ್ಯೂಷನ್‍ಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಚಾಕುವಿನಿಂದ ಕತ್ತು ಕುಯ್ದುಕೊಂಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್‍ನ ಖಾಸಗಿ ಶಾಲೆಯ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಶಂಕರಮಠ ಸಮೀಪದ ಅನುಪಮಾ ಇಂಗ್ಲಿಷ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ರಾಕೇಶ್ (17) ಎಂಬಾತನೇ ಚಾಕುವಿನಿಂದ ಕತ್ತು ಕುಯ್ದುಕೊಂಡಿದ್ದಾನೆ. ಈತನನ್ನು ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಪೊಲೀಸರು ಹೇಳಿದ್ದಾರೆ. 
ಚಾಟ್ಸ್ ಅಂಗಡಿ ನಡೆಸುವ ಕಮಲಾ ನಗರ ನಿವಾಸಿ ಪ್ರಭಾಕರ್ ರಾವ್ ಹಾಗೂ ಲಕ್ಷ್ಮಿ ದಂಪತಿ ಪುತ್ರನಾಗಿರುವ ರಾಕೇಶ್‍ನನ್ನು ಶಾಲೆಯಲ್ಲೇ ಇರುವ ಟ್ಯೂಷನ್‍ಗೆ ಸೇರಿಸಲಾಗಿತ್ತು. ಬೆಳಗ್ಗೆ 6.30ರಿಂದ 8 ಗಂಟೆವರೆಗೂ ಟ್ಯೂಷನ್ ನಡೆಸಲಾಗುತ್ತಿತ್ತು. ಎಂದಿನಂತೆ ಮಂಗಳವಾರ ಬೆಳಗ್ಗೆ ತಂದೆ ಪ್ರಭಾಕರ್ ಅವರು ರಾಕೇಶ್ ನನ್ನು ಟ್ಯೂಷನ್‍ಗೆಂದು 6.30ಕ್ಕೆ ಶಾಲೆ ಬಳಿ ಬಿಟ್ಟು ಹೋಗಿದ್ದರು. 
ಆದರೆ, ಟ್ಯೂಷನ್‍ಗೆ ತೆರಳದ ರಾಕೇಶ್ ಶಾಲೆಯ ಸುತ್ತಮುತ್ತ ಓಡಾಡಿಕೊಂಡಿದ್ದ. ಇದನ್ನು ಗಮನಿಸಿದ ಸ್ನೇಹಿತರು ಹಾಗೂ ಶಿಕ್ಷಕರು ಕೊಠಡಿಯೊಳಗೆ ಬರುವಂತೆ ಹೇಳಿದ್ದರು. ಆದರೆ, ಒಳಗೆ ಬಾರದೆ ಓಡಾಡುತ್ತಿದ್ದ ರಾಕೇಶ್ 7.30ರ ಸುಮಾರಿಗೆ ರಕ್ತ ಸುರಿಯುತ್ತಿದ್ದ ಕತ್ತಿನ ಭಾಗಕ್ಕೆ ಕೈ ಹಿಡಿದುಕೊಂಡು ಬಂದಿದ್ದ. ಈ ವೇಳೆ, ತನಗೆ ಯಾರೋ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಕುಯ್ದು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾನೆ. 
ಇದರಿಂದ ಆತಂಕಗೊಂಡ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಅದೇ ವೇಳೆ ತಂದೆ ಪ್ರಭಾಕರ್‍ಗೂ ಮಾಹಿತಿ ನೀಡಿದ್ದರು. ಗಾಯಾಳುಗೆ ಹೆಚ್ಚಿನ ಚಿಕಿತ್ಸೆಗಾಗಿ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಕತ್ತಿನ ಭಾಗಕ್ಕೆ ಹೊಲಿಗೆ ಹಾಕಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ಹೇಳಿದ್ದಾರೆ. 
`ಮಗನ ಮೇಲೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಕುಯ್ದಿರುವುದು ಶಾಲೆಯ ಶಿಕ್ಷಕರಿಂದ ಗೊತ್ತಾಗಿದೆ. ಅದೇ ರೀತಿ ಪೊಲೀಸರಿಗೆ ದೂರು ನೀಡಿದ್ದೇನೆ. ಶಾಲೆ ಶಿಕ್ಷಕರು ಹಾಗೂ ಪೊಲೀಸರು ಹೇಳುವ ಪ್ರಕಾರ, ರಾಕೇಶ್, ತಾನಾಗಿಯೇ ಚಾಕುವಿನಿಂದ ಕುಯ್ದುಕೊಂಡಿದ್ದಾಗಿ ಹೇಳುತ್ತಿದ್ದಾರೆ. ಆದರೆ, ಒಬ್ಬ ಬಾಲಕ ತಾನಾಗಿಯೇ ಚಾಕುವಿನಿಂದ ಕತ್ತು ಕುಯ್ದುಕೊಳ್ಳಲು ಹೇಗೆ ಸಾಧ್ಯ? ಅದು ಶಾಲೆಯ ಬಳಿಯೇ ಏಕೆ?'  
ಸಿಸಿ ಕ್ಯಾಮರಾದಲ್ಲಿ ಸೆರೆ
ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಶಾಲೆಗೆ ಭೇಟಿ ನೀಡಿದ್ದರು. ಶಾಲೆಯ ಗೇಟ್ ಬಳಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ವಿಡಿಯೋ ಪರಿಶೀಲನೆ ವೇಳೆ ರಾಕೇಶ್, 6.30ರಿಂದ 7.30ರವರೆಗೂ ಶಾಲೆ ಆವರಣ ಪ್ರವೇಶಿಸಿಯೇ ಇಲ್ಲ. 
ಆತ ಅತ್ತಿಂದಿತ್ತ ಸುತ್ತಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಶಾಲೆಯೊಳಗೆ ಪ್ರವೇಶಿಸುತ್ತಾನೆ. ಆದರೆ, ಚಾಕುವಿನಿಂದ ಬೇರೆಯವರು ಇರಿದಿರುವ ಅಥವಾ ಈತನೇ ಇರಿದುಕೊಂಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. 
ಸುತ್ತಮುತ್ತಲಿನ ಸ್ಥಳೀಯರ ವಿಚಾರಣೆ ಸಂದರ್ಭದಲ್ಲೂ ಅಂತಹ ಯಾವುದೇ ಅನುಮಾನ ಕಂಡುಬಂದಿಲ್ಲ. ಘಟನೆ ನಡೆದ ಸ್ಥಳದಲ್ಲೇ ಕತ್ತು ಕುಯ್ದುಕೊಳ್ಳಲು ಬಳಸಿದ್ದ ಶಾಲಾ ಮಕ್ಕಳು ಸ್ಕಿಕ್ಕರ್ ಕಟ್ ಮಾಡಲು ಬಳಸುವ ಸಣ್ಣ ಚಾಕು ಸಿಕ್ಕಿದೆ' ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. 
`ಎಲ್ಲಕ್ಕಿಂತ ಮುಖ್ಯವಾಗಿ, ಬೇರೆಯವರು ಕತ್ತು ಕುಯ್ಯುವುದು ಹಾಗೂ ಅವರೇ ಕತ್ತು ಕುಯ್ದುಕೊಳ್ಳುವುದಕ್ಕೆ ವ್ಯತ್ಯಾಸವಿರುತ್ತದೆ. ಬಾಲಕನಿಗೆ ಆಗಿರುವ ಗಾಯ ಗಮನಿಸಿದಾಗ ಅದು ತಾನಾಗಿಯೇ ಕತ್ತು ಕುಯ್ದುಕೊಂಡಿರುವಂತಿದೆ. ಆದರೂ, ಎಲ್ಲ ಕೋನಗಳಲ್ಲೂ ತನಿಖೆ ನಡೆಸಲಾಗುತ್ತದೆ' ಎಂದು ಅಧಿಕಾರಿ ಹೇಳಿದರು. ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com