ಕಳಸಾ ಬಂಡೂರಿಗೆ ಸಂಧಾನ ಮಾರ್ಗ

ಕಳಸಾ-ಬಂಡೂರಿ ನಾಲಾ ಜೋಡಣೆ ವಿವಾದ ಬಗೆಹರಿಸಲು ರಾಜ್ಯದ ಆಡಳಿತ ಮತ್ತು ವಿಪಕ್ಷ ನಾಯಕರು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರದ ಆಡಳಿತ...
ಎಂ.ಬಿ.ಪಾಟೀಲ್
ಎಂ.ಬಿ.ಪಾಟೀಲ್

ಬೆಂಗಳೂರು:ಕಳಸಾ-ಬಂಡೂರಿ ನಾಲಾ ಜೋಡಣೆ ವಿವಾದ ಬಗೆಹರಿಸಲು ರಾಜ್ಯದ ಆಡಳಿತ ಮತ್ತು ವಿಪಕ್ಷ ನಾಯಕರು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರದ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಭೇಟಿಗೆ ಸಮಯ ಪಡೆದುಕೊಳ್ಳಬೇಕು ಎಂದು ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು, ವಿವಿಧ ಮಠಾಧೀಶರು ಮತ್ತು ರೈತ ಮುಖಂಡರು ಒಕ್ಕೊರಲ ನಿರ್ಣಯ ಕೈಗೊಂಡರು.

ನಗರದ ಶಾಸಕರ ಭವನದಲ್ಲಿ ನರಗುಂದದ ರೈತರ ಸಂತರ ಶ್ರಮಿಕರ ಪಕ್ಷಾತೀತ ಒಕ್ಕೂಟ ಹಮ್ಮಿಕೊಂಡಿದ್ದ ಉನ್ನತ ಮಟ್ಟದ ಸಭೆಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ, ವನಶ್ರೀ ಮಠದ ಜಯದೇವ ಸ್ವಾಮೀಜಿ, ನಂದಪುರಿಯ ಪುರುಷೋತ್ತಮ ಸ್ವಾಮೀಜಿ, ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದ 25 ಶಾಸಕರು, ಸಚಿವರು, ಇಬ್ಬರು ಸಂಸದರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು ಪಕ್ಷಾತೀತವಾಗಿ ಅಧಿವೇಶನದಲ್ಲಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇವೆಂದು ಸಮ್ಮತಿಸಿದರು.

ಸಭೆ ಆರಂಭದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕಳಸಾ-ಬಂಡೂರಿ ಯೋಜನೆ ಉತ್ತರ ಕರ್ನಾಟಕದ ಜನರ ಬದುಕಿನ ಪ್ರಶ್ನೆಯಾಗಿದೆ. ಜನಪ್ರತಿನಿಧಿಗಳು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುವುದು ಬೇಡ. ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಿ. ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವ ವಹಿಸಬೇಕು. ಅಂತೆಯೇ ಅಲ್ಲಿನ ವಿಪಕ್ಷ ನಾಯಕರ ಭೇಟಿಗೆ ರಾಜ್ಯದ ಆಡಳಿತ ಪಕ್ಷದ ನಾಯಕರಾದ ಕೆಪಿಸಿಸಿ ಅಧ್ಯಕ್ಷ
ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಮುಂದಾಗಬೇಕು ಎಂದು ಸಲಹೆ ನೀಡಿದರು.

ಜತೆಗೆ ಜೆಡಿಎಸ್, ಜೆಡಿಯು ಪಕ್ಷದ ನಾಯಕರ ಜೊತೆಗ ರೈತ ಮುಖಂಡರ ನಿಯೋಗ ಕರೆದುಕೊಂಡು ಹೋಗಲು ರಾಜಕೀಯ ನಾಯಕರು ಮುಂದಾಗಬೇಕು. ನಂತರ ಪ್ರಧಾನಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರನ್ನು ಭೇಟಿ ಮಾಡಿ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಒತ್ತಡ ಹಾಕಬೇಕು. ಅಧಿವೇಶನದಲ್ಲಿ ಎಲ್ಲ ಪ್ರತಿನಿಧಿಗಳು ಕಳಸಾ-ಬಂಡೂರಿ ಯೋಜನೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಹೇಳಿದಾಗ ಸಭೆಯಲ್ಲಿದ್ದ ಎಲ್ಲರೂ ಒಪ್ಪಿಗೆ ಸೂಚಿಸಿದರು.

ನರಗುಂದ ಶಾಸಕ ಬಿ.ಆರ್.ಯಾವಗಲ್ ಮಾತನಾಡಿ, ನದಿ ನೀರು ಹಂಚಿಕೆ ಇನ್ನೂ ನ್ಯಾಯಾಲದಲ್ಲಿದೆ. ಹೀಗಾಗಿ ಇದೀಗ ಕೈಗೊಳ್ಳುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ರಾಜಿ ಸಂಧಾನ ಮೂಲಕವೇ ಯೋಜನೆ ಕೈಗೊಳ್ಳಲು ಸಾಧ್ಯ ಎಂದು ತಿಳಿಸಿದರು. ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಕಳಸಾ-ಬಂಡೂರಿ ಕೇವಲ ಉತ್ತರ ಕರ್ನಾಟಕದ ಸಮಸ್ಯೆ ಅಲ್ಲ. ಇದು ರಾಜ್ಯದ ಸಮಸ್ಯೆಯಾಗಿದೆ. ಕನ್ನಡಿಗರು ಸೌಮ್ಯ ಸ್ವಭಾವದವರು, ಸಿಡಿದೆದ್ದರೆ ಯಾವ ಸರ್ಕಾರಕ್ಕೂ ಉಳಿಗಾಲವಿಲ್ಲ. ಶೀಘ್ರದಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಶಾಸಕರಾದ ಜಿ.ಎಸ್.ಪಾಟೀಲ್, ಸಿದ್ದು ನ್ಯಾಮಗೌಡ, ರಾಮಕೃಷ್ಣ ದೊಡ್ಡಮನಿ, ಆನಂದ್ ಮಾಮನಿ, ಜಿ.ಎಚ್. ಕೋನರೆಡ್ಡಿ, ವಿಜಯಾನಂದ ಕಾಶಪ್ಪನವರ್, ಕೆ.ಎಸ್. ಪುಟ್ಟಣ್ಣಯ್ಯ, ಪ್ರಸಾದ ಅಬ್ಬಯ್ಯ, ಎಂ.ಕೆ.ಪಟ್ಟಣಶೆಟ್ಟಿ, ಸಂಸದ ಪಿ.ಸಿ. ಗದ್ದಿಗೌಡರ್, ಮಾಜಿ ಶಾಸಕರಾದ ಸಿ.ಸಿ.ಪಾಟೀಲ್, ಡಿ. ಆರ್. ಪಾಟೀಲ್, ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ. ನಾಡಗೌಡ ಹಾಗೂ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com