ಮೈಸೂರ್ ಸ್ಯಾಂಡಲ್ ಕಾರ್ಖಾನೆ ತಾತ್ಕಾಲಿಕ ಸ್ಥಗಿತ

ವಿಶ್ವಪ್ರಸಿದ್ಧ ಮೈಸೂರು, ಶ್ರೀಗಂಧದ ನಾಡು ತನ್ನ ಸುಗಂಧ ಕಳೆದುಕೊಳ್ಳುತ್ತಿದೆ. ಶ್ರಿಗಂಧದ ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗಿರುವ ಕಾರಣ...
ಮೈಸೂರ್ ಸ್ಯಾಂಡಲ್
ಮೈಸೂರ್ ಸ್ಯಾಂಡಲ್
ಬೆಂಗಳೂರು: ವಿಶ್ವಪ್ರಸಿದ್ಧ ಮೈಸೂರು, ಶ್ರೀಗಂಧದ ನಾಡು ತನ್ನ ಸುಗಂಧ ಕಳೆದುಕೊಳ್ಳುತ್ತಿದೆ. ಶ್ರಿಗಂಧದ ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗಿರುವ ಕಾರಣ ಮೈಸೂರು ಶ್ರಿಗಂಧದ ತೈಲ ಕಾರ್ಖಾನೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. 1916 ರಲ್ಲಿ ಸ್ಥಾಪಿತವಾದ ಈ ಕಾರ್ಖಾನೆ ಹಿಂದೆಂದೂ ಇಂತಹ ಸಮಸ್ಯೆ ಎದುರಿಸಿದ್ದಿಲ್ಲ. ಆದರೆ, ಈಗ ಗಂಧದ ಕೊರತೆಯಿಂದಾಗಿ ಏಪ್ರಿಲ್ ವರೆಗೆ ಕಾರ್ಖಾನೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯ ಶತಮಾನೋತ್ಸವ ಸಮಯದಲ್ಲೇ ಇಂತಹ ಸಮಸ್ಯೆ ಎದುರಾಗಿದ್ದು, ಸುಮಾರು ಐದಾರು ತಿಂಗಳುಗಳ ಕಾಲ ಕಾರ್ಖಾನೆ ಮುಚ್ಚಲಿದೆ. ಪ್ರಸ್ತುತ ಇರುವ 2,800 ಕೆ.ಜಿ. ಶ್ರೀಗಂಧದ ಎಣ್ಣೆಯನ್ನು ಡಿಸೆಂಬರ್ ತಿಂಗಳವರೆಗೆ ಮಾತ್ರ ಬಳಸಬಹುದು. ಆನಂತರದ ಉತ್ಪಾದನೆಗೆ ಬೇಕಾದ ಕಚ್ಚಾವಸ್ತು ಕಾರ್ಖಾನೆಯಲ್ಲಿಲ್ಲ. ಈಗಾಗಲೇ ಗಂಧದ ಎಣ್ಣೆ ತಯಾರು ಮಾಡುವ ಘಟಕಕ್ಕೆ ಬೀಗ ಹಾಕಲಾಗಿದೆ. ಮುಂದಿನ ನಾಲ್ಕು ತಿಂಗಳಿಗೆ ಆಗುವಷ್ಟು ಎಣ್ಣೆಯನ್ನು ತಯಾರು ಮಾಡಲು ಅಗತ್ಯವಿರುವಷ್ಟು ಗಂಧವನ್ನು ಸಿದ್ದ- ಪಡಿಸಲಾಗುತ್ತಿದೆ ಎಂದು ಕೆಎಸ್ ಡಿಎಲ್‍ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ. ಸುವರ್ಣ ಕುಮಾರ್ ತಿಳಿಸಿದ್ದಾರೆ. 
ಶೇ. 70ರಷ್ಟು ಕುಸಿತ: ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ಇರುವ ಶ್ರೀಗಂಧದ ಎಣ್ಣೆ ತಯಾರು ಮಾಡುವ ಸರ್ಕಾರಿ ಕಾರ್ಖಾನೆಗಳು ಉತ್ಪಾದನೆ ಮಾಡಿದಷ್ಟು ಎಣ್ಣೆಯನ್ನು ಬಳಸಿ ಸಾಬೂನು ತಯಾರು ಮಾಡಲಾಗುತ್ತಿತ್ತು. ಆದರೆ, ಶಿವಮೊಗ್ಗದ ಶ್ರೀಗಂಧದ ಎಣ್ಣೆ ತಯಾರು ಮಾಡುವ ಕಾರ್ಖಾನೆ ಮುಚ್ಚಿ ವರ್ಷಗಳೇ ಕಳೆದಿವೆ. ಈಗಿರುವುದು ಮೈಸೂರು ಕಾರ್ಖಾನೆ ಮಾತ್ರ. ಅಲ್ಲೀಗ ಕೇವಲ 17 ಟನ್ ಶ್ರೀಗಂಧ ಮಾತ್ರ ಇದ್ದು ಇನ್ನೂ 40 ಟನ್‍ನಷ್ಟು ಶ್ರೀಗಂಧದ ಕೊರತೆ ಎದುರಾಗಿದೆ. ಗಂಧದ ಎಣ್ಣೆ ತಯಾರು ಮಾಡಲು ಕಾರ್ಖಾನೆಗೆ ಪ್ರತಿ ತಿಂಗಳು 200 ಕೆ.ಜಿ. ಗಂಧ ಬೇಕು. ಆದರೆ, ರೈತರಿಂದ ಅಷ್ಟು ಪ್ರಮಾಣದ ಗಂಧ ಸಿಗುತ್ತಿಲ್ಲ. ರಾಜ್ಯದಲ್ಲಿ ಪ್ರಸ್ತುತ ಕೇವಲ 3 ಎಕರೆಯಷ್ಟು ಮಾತ್ರ ಶ್ರೀಗಂಧ ಬೆಳೆಯಲಾಗುತ್ತಿದೆ. ಆದರೆ, 1950ರಲ್ಲಿ ಇದರ ಪ್ರಮಾಣ ಸುಮಾರು 40 ಸಾವಿರ ಎಕರೆ ಇತ್ತು. ಅಂದು ನಮ್ಮಲ್ಲಿ ಉತ್ಪಾದನೆಯಾಗುತ್ತಿದ್ದ ಗಂಧಕ್ಕೂ ಇಂದಿಗೂ ತಾಳಮೇಳವೇ ಇಲ್ಲ. ಹೀಗಾಗಿ ಶೇ.7ರಷ್ಟು ಗಂಧವನ್ನು ತಮಿಳುನಾಡು, ಕೇರಳದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಉಳಿದ ಶೇ.30- ರಷ್ಟು ಮಾತ್ರ ನಮ್ಮಲ್ಲಿ ಬೆಳೆಯಲಾಗುತ್ತಿದೆ ಎನ್ನುತ್ತಾರೆ ಸುವರ್ಣಕುಮಾರ್.
ಆಸ್ಟ್ರೇಲಿಯಾ ಆಮದು ವಿಫಲ: ಈ ಹಿಂದೆ 2002ರಲ್ಲಿ ಆಸ್ಟ್ರೇಲಿಯಾದಿಂದ 100 ಟನ್ ಶ್ರೀಗಂಧವನ್ನು ತರಿಸಿಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ಅಲ್ಲಿಂದಲೇ ಶ್ರೀಗಂಧ ತರಿಸಿಕೊಳ್ಳುವ ಯೋಜನೆ ಸಹ ಸರ್ಕಾರದ್ದಾಗಿತ್ತು. ಆದರೆ, ಅಲ್ಲಿನ ಒಂದು ಟನ್ ಗಂಧದಿಂದ ಕೇವಲ 15-20 ಕೆ.ಜಿ. ಎಣ್ಣೆ ಮಾತ್ರ ಉತ್ಪಾದನೆ ಮಾಡಲು ಸಾಧ್ಯವಾಗುವುದರಿಂದ ಈ ಯೋಜನೆ ಕೈಬಿಡಲಾಗಿದೆ ಎನ್ನುತ್ತಾರೆ ಕೆಎಸ್ ಡಿಎಲ್‍ನ ಹಿರಿಯ ಅಧಿಕಾರಿಗಳು. ಈ ಎಲ್ಲ ಸಮಸ್ಯೆಗಳು ನಡುವೆಯೂ ಶತಮಾನೋತ್ಸವ ಸಂದರ್ಭಕ್ಕೆ ಕಾರ್ಖಾನೆಯನ್ನು ಮತ್ತೆ ತೆರೆಯುವ ಎಲ್ಲಾ ಸಾಧ್ಯತೆಗಳಿವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com