ಬೇಸತ್ತು ರಜೆ ಕೇಳಿದ ಹರ್ಷ ಗುಪ್ತ

ನಿಷ್ಠುರ ಮತ್ತು ಖಡಕ್ ನಿರ್ಧಾರಗಳಿಗೆ ಹೆಸರಾದ ಐಎಎಸ್ ಅಧಿಕಾರಿ ಹರ್ಷ ಗುಪ್ತ ರಾಜಕೀಯ ಒತ್ತಡಗಳಿಂದ ಬೇಸತ್ತು ಅನಿರ್ದಿಷ್ಟ ಕಾಲ ರಜೆ ಮೇಲೆ ತೆರಳಲು...
ಮೈಸೂರು ಪೇಪ್‍ರ್ ಮಿಲ್
ಮೈಸೂರು ಪೇಪ್‍ರ್ ಮಿಲ್
ಬೆಂಗಳೂರು:  ನಿಷ್ಠುರ ಮತ್ತು ಖಡಕ್ ನಿರ್ಧಾರಗಳಿಗೆ  ಹೆಸರಾದ ಐಎಎಸ್ ಅಧಿಕಾರಿ ಹರ್ಷ ಗುಪ್ತ ರಾಜಕೀಯ ಒತ್ತಡಗಳಿಂದ ಬೇಸತ್ತು ಅನಿರ್ದಿಷ್ಟ ಕಾಲ ರಜೆ ಮೇಲೆ ತೆರಳಲು
ನಿರ್ಧರಿಸಿದ್ದಾರೆ. ಮೈಸೂರು ಪೇಪ್‍ರ್ ಮಿಲ್ ಎಂ.ಡಿ. ಯಾಗಿರುವ ಹರ್ಷ ಗುಪ್ತ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ನನೆ ರತ್ನಾಕರ್ ಕ್ರಮಕ್ಕೆ ಬೇಸತ್ತು ಸೇವೆಯಿಂದಲೇ ದೂರ ಉಳಿದಿದ್ದಾರೆ. ಸುಪ್ರೀಂ ಕೋರ್ಟ್‍ನ ಹಸಿರು  ಪೀಠದಂತೆ ಕ್ರಮ ಕೈಗೊಂಡ ತಪ್ಪಿಗೆ ಟೀಕೆ, ನಿಂದನೆಗಳು ಹೆಚ್ಚಾಗಿದ್ದು, ಇದರಿಂದ ಬೇಸತ್ತು ರಜೆ ಹೋಗುತ್ತೇನೆ ಎಂದು ಅವರು ಸರ್ಕಾರಕ್ಕೆ ವಿನಂತಿಸಿದ್ದಾರೆ  ಹರ್ಷಗುಪ್ತ ಅವರ ಈ ನಿರ್ಧಾರಕ್ಕೆ ಸಚಿವ ಕಿಮ್ಮನೆ ರತ್ನಾಕರ್ ಸಾರ್ವಜನಿಕವಾಗಿ ಮಾಡಿದ ವಾಗ್ದಾಳಿಯೇಕಾರಣ ಎನ್ನಲಾಗಿದೆ. ಸೋಮವಾರ ಸಂಜೆ 5.30ರ ಸಮಯದಲ್ಲಿ ವಿಧಾನಸೌಧದ ಮೂರನೇ ಮಹಡಿಯ ಸಮಿತಿ ಕೊಠಡಿ ಬಳಿಯ ಕಾರಿಡಾರ್‍ನಲ್ಲಿ ಹರ್ಷ ಗುಪ್ತ ಅವರನ್ನು ಸಚಿವ ಕಿಮ್ಮನೆ ರತ್ನಾಕರ್ ಸಾರ್ವಜನಿಕವಾಗಿ ಬೈದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ. ಕೈಗಾರಿಕೆ ಇಲಾಖೆಗೆ ಸಂಬಂಧಿಸಿದ ವಿಚಾರವನ್ನು ತಮ್ಮ ಗಮನಕ್ಕೆ ತಂದಿಲ್ಲ ಎಂದು ಕೂಗಾಡಿ ಗದ್ದಲ ಎಬ್ಬಿಸಿದ್ದಾರೆ ಎಂದೂ ಹೇಳಲಾಗಿದೆ. ಈ ಎಲ್ಲಾ ವಿಚಾರಗಳನ್ನು ದಾಖಲಿಸಿ ಹರ್ಷ ಗುಪ್ತ ಅವರು ರಾಜ್ಯ ಮುಖ್ಯ
ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳುವುದಕ್ಕೆ ಹೋದರೆ ಹೀಗೆಲ್ಲಾ
ಸಮಸ್ಯೆ ಅನುಭವಿಸುವಂತಾಗಿದೆ.
ಈ ಬೆಳವಣಿಗೆಗಳ ಹಿಂದಿನ ಘಟನೆ ಏನು?
ಆಹಾರ ಇಲಾಖೆಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಪತ್ತೆ ಹಚ್ಚಿದ್ದ ಹರ್ಷ ಗುಪ್ತ ಅವರನ್ನು ಸರ್ಕಾರ ಪಶುಸಂಗೋಪನಾ ಇಲಾಖೆಗೆ ಎತ್ತಂಗಡಿ ಮಾಡಿತ್ತು. ಅವರು ಅಲ್ಲಿಯೂ
ಅಕ್ರಮಗಳನ್ನು ಪತ್ತೆ ಹಚ್ಚಿ ಇಲಾಖೆ ಅಧಿಕಾರಿಗಳನ್ನು ಆರೋಪಕ್ಕೆ ಗುರಿ ಮಾಡಿದ್ದರು. ನಂತರ ರಾಜಕೀಯ ಒತ್ತಡಗಳಿಗೆ ಮಣಿದ ಸರ್ಕಾರ ಹರ್ಷ ಗುಪ್ತ ಅವರನ್ನು ಯಾವ ಅಧಿಕಾರಿಗಳೂ
ಹೋಗಲು ಇಚ್ಛಿಸದ ರೋಗಗ್ರಸ್ತ ಮೈಸೂರು ಪೇಪರ್ ಮಿಲ್ ಎಂ.ಡಿ. ಹುದ್ದೆಗೆ ನಿಯೋಜಿಸಿತ್ತು. ಮೈಸೂರು ಪೇಪರ್ ಮಿಲ್ ಸಂಸ್ಥೆಗೆ ಸೇರಿದ ಕಾಗದದ ಕಾರ್ಖಾನೆ ಮತ್ತು ಸಕ್ಕರೆ
ಕಾರ್ಖಾನೆಗಳು ಭದ್ರಾವತಿಯಲ್ಲಿವೆ. ಇವುಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಅನುಸರಿಸದ ಕಾರಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಯನ್ನು ಬಂದ್
ಮಾಡುವುದಕ್ಕೆ ಆದೇಶಿಸಿತ್ತು. ಈ ವಿಚಾರ ಸುಪ್ರೀಂ ಕೋರ್ಟ್‍ನ ಹಸಿರು ಪೀಠದ ಮುಂದಿತ್ತು. ಸದ್ಯ ಇರುವ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗೆ ಅನುಗುಣವಾಗಿ ಭದ್ರಾವತಿಯಲ್ಲಿರುವ ಎರಡು ಘಟಕಗಳ ಪೈಕಿ ಯಾವುದಾದರೂ ಒಂದು ಘಟಕ ನಡೆಸುವುದಕ್ಕೆ ಮಾತ್ರ ಕೋರ್ಟ್ ಆದೇಶಿಸಿದೆ. ಇದನ್ನಾಧರಿಸಿ ಹರ್ಷ ಗುಪ್ತ, ರೈತರಿಗೆ ಅನುಕೂಲವಾಗುವಂತೆ ಸಕ್ಕರೆ  ಕಾರ್ಖಾನೆ ಆರಂಭಿಸಿ, ಕಾಗದದ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಿದರು. ಅಲ್ಲಿನ ನೌಕರರಿಗೆ ರಜೆ ಮತ್ತು ಅರ್ಧ ವೇತನ ನೀಡುವಂತೆ ಕಾರ್ಮಿಕ ಇಲಾಖೆ ಆದೇಶದಂತೆ ಕ್ರಮ ಕೈಗೊಂಡರು. ಆದರೆ, ಈ ಕ್ರಮಕ್ಕೆ ನೌಕರರು ಪ್ರತಿಭಟಿಸಿ, ಸಂಸ್ಥೆಯ ಅಧಿಕಾರಿಗಳನ್ನು ಬಂಧಿಸಿ ಗದ್ದಲ ಎಬ್ಬಿಸಿದ್ದರು.
ಹರ್ಷ ಗುಪ್ತ ಅವರ ಈ ಕ್ರಮವನ್ನು ಸಚಿವ ಕಿಮ್ಮನೆ ರತ್ನಾಕರ್ ಕೂಡಾ ವಿರೋಧಿಸಿದ್ದರು. ಅಷ್ಟೇ ಅಲ್ಲ. ವಿಧಾನಸೌಧದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಕಾರ್ಖಾನೆ ಬಂದ್ ಮಾಡುವ ಮುನ್ನ
ತಮಗೇಕೇ ಹೇಳಿಲ್ಲ ಎಂದು ಕೂಗಾಡಿದ್ದರು. ಇದಕ್ಕೆ ಸಮಜಾಯಿಷಿ ನೀಡಿದ ಹರ್ಷ ಗುಪ್ತ, ಈ ಬಗ್ಗೆ ಕೈಗಾರಿಕೆ ಸಚಿವ ಆರ್‍ವಿ ದೇಶಪಾಂಡೆ, ಇಲಾಖೆ ಪ್ರಧಾನ
ಕಾರ್ಯದರ್ಶಿ ರತ್ನಪ್ರಭಾ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲಾಗಿದೆ. ಕೋರ್ಟ್ ತೀರ್ಪು ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಆದರೂ ಸಚಿವರು ಲೆಕ್ಕಿಸಲಿಲ್ಲ. `ಹೀಗಾಗಿ ಕಾರ್ಖಾನೆಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ. ನಮ್ಮ
ಕ್ರಮಕ್ಕೆ ಸಚಿವರು ಸಹಕಾರ ನೀಡುತ್ತಿಲ್ಲ' ಎಂದು ಹರ್ಷ ಗುಪ್ತ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com