ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆ (ಮೂಡುಬಿದಿರೆ): ಕರ್ನಾಟಕದಲ್ಲಿ ಆಡಳಿತ, ನ್ಯಾಯ ವಿತರಣೆ, ಶಿಕ್ಷಣ ಈ ಮೂರೂ ಕ್ಷೇತ್ರಗಳನ್ನು ಒಳಗೊಂಡಂತೆ ಎಲ್ಲ ವ್ಯವಹಾರಗಳು ರಾಜ್ಯಭಾಷೆಯಾದ ಕನ್ನಡದಲ್ಲಿ ಅಧಿಕೃತವಾಗಿ ನಡೆಯಬೇಕು. ಕರ್ನಾಟಕದಿಂದ ಕೈತಪ್ಪಿದ ಎಲ್ಲ ಪ್ರದೇಶಗಳು ಮರಳಿ ಕನ್ನಡಾಂಬೆಯ ಮಡಿಲು ಸೇರಬೇಕು. ಕನ್ನಡ ನೆಲ- ಜಲಕ್ಕೆ ಹಾನಿಯಾಗದೆ ಸರ್ವರ ಒಪ್ಪಿಗೆಯ ನೀತಿ ತುರ್ತಾಗಿ ಜಾರಿಯಾಗಲಿ. ಮೂಡುಬಿದಿರೆಯಲ್ಲಿ ಗುರುವಾರ ಆರಂಭಗೊಂಡ
12ನೇ ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಾಹಿತ್ಯ ಸಂಸ್ಕೃತಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರ ಆಗ್ರಹಪೂರ್ವಕ ಆಶಯಗಳಿವು. ಕನ್ನಡದ ಮುನ್ನಡೆಗೆ ರಾಜ್ಯಭಾಷೆಯ ಅಳವಡಿಕೆಯಲ್ಲಿನ ಕ್ರಿಯಾಸಂಕಲ್ಪ ಮತ್ತು ಸಾಹಸ ಪ್ರವೃತ್ತಿಯ ಕೊರತೆ ಎದ್ದು ಕಾಣುತ್ತಿದೆ. ಸಮಾಜ, ಸರ್ಕಾರಗಳು ಒಮ್ಮತವಾಗಿ ತಮ್ಮ ಸಂಕಲ್ಪ ಶಕ್ತಿಯನ್ನು ಕನ್ನಡದ ವ್ಯಾಪ್ತಿವೃದ್ಧಿಗೆ ಕೇಂದ್ರೀಕರಿಸುವ ಕಾಲ ಸನ್ನಿಹಿತವಾಗಿದೆ. ಅನ್ಯ ಭಾಷಿಕರಿರಲಿ, ಕನ್ನಡಿಗರೇ ಇರಲಿ ಪ್ರೌಢಶಾಲಾವಹಂತದವರೆಗೆ ಕನ್ನಡ ಕಲಿಕೆಯನ್ನು ಮಾಡಲೇಬೇಕು ಎಂದು ಅವರು ಬಲವಾಗಿ ಆಗ್ರಹಿಸಿದರು.
ನಮ್ಮ ನೆಲ ನಮಗಿರಲಿ: ಮಹಾರಾಷ್ಟ್ರಿಕರ ರಾಜಸ ಸ್ವಭಾವದ ಕಾರಣದಿಂದಾಗಿ ಬೆಳಗಾವಿ ಜಿಲ್ಲೆ ಇನ್ನೂ ಕೂಡ ಕರ್ನಾಟಕದ ಅ„ಕೃತ ಭಾಗವಾಗಿ ಉಳಿದಿದೆ. ಕನ್ನಡಿಗರ
ಸಾತ್ವಿಕ ಸ್ವಭಾವದ ಕಾರಣದಿಂದಾಗಿ ಕಾಸರಗೋಡು ಸೇರಿದಂತೆ ಇನ್ನೂ ಅನೇಕ ಪ್ರದೇಶಗಳು ನಮ್ಮದಾಗಲೇ ಇಲ್ಲ. ಗೋವಾ ರಾಜ್ಯದ ಬೈನಾ ಪ್ರದೇಶದಲ್ಲಿರುವ ಕನ್ನಡಿಗರು ನೆಲೆ ಕಳೆದುಕೊಳ್ಳುತ್ತಿದ್ದಾರೆ. ಹೊಸತನಕ್ಕೆ ತುಡಿಯುತ್ತಿರುವ ಈ ಹೊತ್ತಿನಲ್ಲಿ ಕನ್ನಡಿಗರ ಹೋರಾಟಕ್ಕೆಕಸುವಿಲ್ಲದಂತಾಗಿದೆ. ಈ ನೆಲ ನಮ್ಮದು ಎನ್ನುವ ತೃಪ್ತಿ ಸಂಪೂರ್ಣವಾಗಬೇಕಾದರೆ ನಮ್ಮ ನೆಲ ನಮ್ಮದಾಗಲೇ ಬೇಕು ಎಂದು ಪ್ರೊ.ಶಾಸ್ತ್ರಿ ಪ್ರತಿಪಾದಿಸಿದರು.
ಸರ್ವರೊಪ್ಪಿಗೆಯ ಜಲನೀತಿ: ನದಿ ನೀರಿನ ಹೋರಾಟದಲ್ಲಿ ತಮಿಳುನಾಡು ಗೆಲವು ಸಾಧಿಸುತ್ತಲೇ ಬರುತ್ತಿದೆ. ಮಹದಾಯಿ-ಮಲಪ್ರಭಾ ನದಿಗಳ ಕಳಸಾ ಬಂಡೂರಿ ನಾಲೆಗಳ ವಿಚಾರದಲ್ಲಿ ರಾಜ್ಯಗಳ ನಡುವೆ ತಿಕ್ಕಾಟ ಇನ್ನೂ ಮುಗಿದಿಲ್ಲ. ಬಯಲುಸೀಮೆಗೆ ನೇತ್ರಾವತಿ ನೀರಿನ ಹರಿವು ವಿಚಾರಲ್ಲಿ ಚಳವಳಿ ಕಾವೇರಿದೆ. ಪರಿಸರ ತಜ್ಞರು, ನೀರಾವರಿ ವಿಭಾಗದ ವಿಜ್ಞಾನಿಗಳು, ರಾಜಕಾರಣಿಗಳು ಸರ್ವ ಜನರಿಗೆ ಸಮಾಧಾನವಾಗುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ತಾಳ್ಮೆ, ಸಂಯಮ ಇರಲಿ: ಬುದ್ಧಿಜೀವಿಗಳು, ವಿಚಾರವಾದಿಗಳ ಮೇಲಿನ ಹಲ್ಲೆ, ಕ್ರೌರ್ಯ ಖಂಡನೀಯ. ಆದರೆ, ಸಮಾಜ ಸಾಹಿತಿಗಳ ಹಿತ ಕಾಯಬೇಕು ಮತ್ತು ಸಾಹಿತಿಗಳು ಸಮಾಜದ ಹಿತ ಕಾಯಬೇಕು. ಎರಡೂ ಕಡೆಗಳಲ್ಲೂ ತಾಳ್ಮೆ, ಸಂಯಮಗಳು ಅವಶ್ಯಕವಾಗಿರಬೇಕು ಎಂದು ಪರಸ್ಪರ ಸಹಬಾಳ್ವೆಯ ನೀತಿಯನ್ನು ಅವರು ಎತ್ತಿ ಹಿಡಿದರು.