ಕನಿಷ್ಠ ವೇತನ ರು.10,520 - 23 ಉದ್ಯಮಗಳು - 32 ಲಕ್ಷ ಕಾರ್ಮಿಕರಿಗೆ ಅನುಕೂಲ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 23 ಉದ್ಯಮಗಳ ಕಾರ್ಮಿಕರಿಗೆ ರು. 10,520 ಕನಿಷ್ಠ ವೇತನ ನಿಗದಿಪಡಿಸಿದ್ದು, ಇದರಿಂದ 32 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ...
ಪಿ.ಟಿ. ಪರಮೇಶ್ವರ್ ನಾಯಕ್
ಪಿ.ಟಿ. ಪರಮೇಶ್ವರ್ ನಾಯಕ್

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 23 ಉದ್ಯಮಗಳ ಕಾರ್ಮಿಕರಿಗೆ ರು. 10,520 ಕನಿಷ್ಠ ವೇತನ ನಿಗದಿಪಡಿಸಿದ್ದು, ಇದರಿಂದ 32 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.

ಕಾರ್ಮಿಕ ಇಲಾಖೆಯ ನೂತನ ಪೋರ್ಟಲ್ ಹಾಗೂ ಸಂಪೂರ್ಣ ನವೀಕೃತ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಒಂದೇ ವೇತನ ಶ್ರೇಣಿ ಪದ್ಧತಿ ಅಳವಡಿಸಲು ಸೂಚಿಸಿದೆ. ಆದರೆ, ರಾಜ್ಯ ಸರ್ಕಾರ ಅದಕ್ಕಿಂತಲೂ ಒಂದು ಹೆಜ್ಜೆ
ಮುಂದಿಟ್ಟಿದ್ದು, ಕನಿಷ್ಠ ವೇತನ ಜಾರಿಗೊಳಿಸಿದೆ.

ಗೃಹ ನಿರ್ಮಾಣ, ಹೋಟೆಲ್ ಉದ್ಯಮ, ಸಿನಿಮಾ, ಎಲೆ-ಕ್ಟ್ರಾನಿಕ್, ಪೀಠೋಪಕರಣ ತಯಾರಿಕೆ ಸೇರಿದಂತೆ ಒಟ್ಟು 23 ಉದ್ಯಮಗಳ ಕಾರ್ಮಿಕರಿಗೆ ಇದು ಅನ್ವಯವಾಗಲಿದೆ ಎಂದು ಹೇಳಿದರು.

9 ಲಕ್ಷ ಕಾರ್ಮಿಕರ ನೋಂದಣಿ: ರಾಜ್ಯದಲ್ಲಿ 2007ರಿಂದ 2013ರವರೆಗೆ ಒಟ್ಟು 2.57 ಲಕ್ಷ ಕಟ್ಟಡ ಕಾರ್ಮಿಕರ ನೋಂದಣಿ ಮಾಡಲಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ 9,66,608 ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಿಸಿದೆ. ಕೇವಲ ಎರಡೂವರೆ ವರ್ಷಗಳಲ್ಲಿ 65 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ರು. 57.34 ಕೋಟಿ ಪರಿಹಾರ, ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

1,806 ಹುದ್ದೆ ಭರ್ತಿಗೆ ಕ್ರಮ: ಇಲಾಖೆಯಲ್ಲಿ ಖಾಲಿ ಇರುವ 1,806 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು ಶೀಘ್ರವೇ ನೇಮಕಾತಿಗೆ ಚಾಲನೆ ದೊರೆಯಲಿದೆ. ಅನುದಾನಿತ ಐಟಿಐ ಕಾಲೇಜುಗಳಲ್ಲಿ ಮಂಜೂರಾದ 906 ಉಪನ್ಯಾಸಕರು, ಹೊಸದಾಗಿ ಸ್ಥಾಪನೆಗೊಂಡ 100 ಐಟಿಐ ಕಾಲೇಜುಗಳ 900 ಹುದ್ದೆ ಸೇರಿ 1,806 ಹುದ್ದೆಗಳ ಭರ್ತಿಗೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದರು.

196 ಅನುದಾನಿತ ಖಾಸಗಿ ಐಟಿಐಗಳ 2,410 ಸಿಬ್ಬಂದಿಗೆ ಇದುವರೆಗೆ ಪಿಂಚಣಿ ಮತ್ತು ಗ್ರಾಚ್ಯುಟಿ ಇರಲಿಲ್ಲ. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು 1,888 ಸಿಬ್ಬಂದಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ಕ್ರಮ ಕೈಗೊಳ್ಳಲಾಗಿದೆ. 13 ಕಾಲೇಜುಗಳು ಇದುವರೆಗೆ ಸಿಬ್ಬಂದಿಗಳ ಮಾಹಿತಿ ಒದಗಿಸಿಲ್ಲ. ಮಾಹಿತಿ ಒದಗಿಸಿದರೆ ಅವರಿಗೂ ಈ ಸೌಲಭ್ಯ ನೀಡಲಾಗುವುದು ಎಂದರು.

ದೊಡ್ಡಬಳ್ಳಾಪುರದಲ್ಲಿ ಕಾರ್ಮಿಕ ಅಕಾಡೆಮಿ: ಕಟ್ಟಡ ನಿರ್ಮಾಣ ವಲಯದಲ್ಲಿ ತರಬೇತಿ, ಅಧ್ಯಯನಕ್ಕಾಗಿ ದೊಡ್ಡಬಳ್ಳಾಪುರದಲ್ಲಿ ರು. 250 ಕೋಟಿ ವೆಚ್ಚದಲ್ಲಿ ಕಟ್ಟಡ ಅಕಾಡೆಮಿಯ ನೀಲನಕ್ಷೆ ಸಿದ್ಧವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲಿ ರು. 8ರಿಂದ 10 ಕೋಟಿ ವೆಚ್ಚದಲ್ಲಿ ಬಹು ಉದ್ದೇಶಿತ ಕಾರ್ಮಿಕ ಕಲ್ಯಾಣ ಭವನ ಸ್ಥಾಪಿಸಲಾಗುವುದು ಎಂದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ತೆರೆಯಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಕಾರ್ಯಾರಂಭವಾಗಲಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಿಡುವಂತಹ ಒಂದು ವ್ಯವಸ್ಥೆ ರೂಪಿಸಿದ್ದು, ಕಾರ್ಮಿಕ ಕಲ್ಯಾಣ ಮಂಡಳಿಯಿಂದಲೇ ಅವರಿಗೆ ಶುಲ್ಕ ಪಾವತಿಸಲಾಗುವುದು ಇದು ಸಹ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com