ಬೆಂಗಳೂರು: ರಸ್ತೆ ಗುಂಡಿಗಳ ದುರಸ್ತಿಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದಲೇ ನಗರದ ನಾಲ್ಕು ಕಡೆಗಳಲ್ಲಿ
ಡಾಂಬರ್ ಘಟಕಗಳನ್ನು ಆರಂಭಿಸಲಾಗುತ್ತಿದೆ. ಕಣ್ಣೂರು, ಮಲ್ಲಸಂದ್ರ, ಸುಂಕದಕಟ್ಟೆ ಹಾಗೂ ಚಿಕ್ಕನಾಗಮಂಗಲದಲ್ಲಿ ನೂತನ ಘಟಕಗಳು ಪ್ರಾರಂಭವಾಗಲಿವೆ. ಈ ಹಿಂದೆ
ಪಾಲಿಕೆಯೇ ಆರಂಭಿಸಿದ್ದ ಡಾಂಬರ್ ಘಟಕ ಕೆಲ ನ್ಯೂನತೆಗಳಿಂದ ಮುಚ್ಚಲ್ಪಟ್ಟಿತ್ತು. ಹೀಗಾಗಿ ರಸ್ತೆ ದುರಸ್ತಿಗೆ ಗುತ್ತಿಗೆದಾರರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ
ಇತ್ತು. ಈಗ ಪಾಲಿಕೆ ಸ್ವಂತ ಘಟಕಗಳ ಸ್ಥಾಪನೆಗೆ ಮುಂದಾಗಿದೆ. ಪಾಲಿಕೆಯು ಪ್ರತಿಯೊಂದು ಘಟಕಕ್ಕೆ 5 ಎಕರೆ ಭೂಮಿಯನ್ನು ನೀಡಲು ಮುಂದಾಗಿದೆ. ಘಟಕ ಸ್ಥಾಪನೆ ಹಾಗೂ ನಿರ್ವಹಣೆಯನ್ನು ಕಂಪನಿಯೇ ನೋಡಿಕೊಳ್ಳಲಿದೆ. ನಿರ್ದಿಷ್ಟ ಪ್ರಮಾಣದಲ್ಲಿ ಡಾಂಬರ್ ಕೊಡುವ ಬಗ್ಗೆ ಪಾಲಿಕೆಯು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಮೂಲಕ ಗುತ್ತಿಗೆದಾರರ ಮೇಲೆ ಅವಲಂಬನೆ ತಪ್ಪಲಿದೆ. ಜೊತೆಗೆ ದುರಸ್ತಿಗೆ ಗುಣಮಟ್ಟದ ಡಾಂಬರ್ ಬಳಸಬಹುದಾಗಿದೆ.