
ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಬದುಕಿದ್ದರೆ ಗುರುವಾರ ಅವರಿಗೆ 86 ವರ್ಷಗಳಾಗಿರುತ್ತಿದ್ದವು. ಅಷ್ಟೇ ಅಲ್ಲ, ರಾಜ್ಯದ ಚಿತ್ರಣವೇ ಬೇರೆಯಾಗಿರುತ್ತಿತ್ತು.
ಹೀಗಂತ, ಪ್ರಾಂಜಲ ಮನಸ್ಸಿನಿಂದ ತಮ್ಮ ಸಹೋದ್ಯೋಗಿಯನ್ನು ನೆನೆದಿದ್ದು ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ. ಕೇವಲ ಮೂರು ದಿನಗಳ ಹಿಂದೆಯಷ್ಟೇ, ಪಟೇಲರ ಜನ್ಮದಿನದ ನೆಪದಲ್ಲಿ ಅವರ ನೆನಪುಗಳನ್ನು ಹಂಚಿಕೊಳ್ಳಬೇಕೆಂದಾಗ ರೂಪುಗೊಂಡಿದ್ದ ಸಮಾರಂಭದಲ್ಲಿ ನಿರೀಕ್ಷೆಗೂ ಮೀರಿ ಹಾಲಿ, ಮಾಜಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಬೆಂಬಲಿಗರು ನೆರೆದಿದ್ದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಯ ಕೊಂಡಜ್ಜಿ ಸಭಾಂಗಣದಲ್ಲಿ ಸಮಾರಂಭದುದ್ದಕ್ಕೂ ಜನ ಬರುತ್ತಲೇ ಇದ್ದರು. ಪುಷ್ಪಾಂಜಲಿ ಸಲ್ಲಿಸಿ ಮಾತಿಗಿಳಿದ ಡಿ.ಬಿ. ಚಂದ್ರೇಗೌಡ ಪಟೇಲರ ಬಹುಮುಖವನ್ನು ಅನಾವರಣಗೊಳಿಸಿದರು. ಸಾಯಕ್ಕೆ ಹುಟ್ಟಿದವರಲ್ಲ ಅವರು. ಸತ್ತು ಬದುಕಿದವರು. ತಲೆ ಬಾಚಿಕೊಂಡೇ ಸಮಾರಂಭಕ್ಕೆ ಹೋಗ್ತಿದ್ರು. ನಿಮ್ಮದೋ ಬಕ್ಕ ತಲೆ, ಬಾಚಣಿಕೆ, ಬಾಚೋದು ಯಾಕೆ ಅಂತ ಕೇಳಿದ್ದಕ್ಕೆ `ಇದ್ದಿದ್ದನ್ನೇ ಹಂಚಿಕೊಳ್ಳಬೇಕು' ಅನ್ನೋರು. ಅವರ ನೆನಪಿನ ಶಕ್ತಿ ಅದ್ಭುತ. ಅಧಿಕಾರಿಗಳಾಗಲಿ, ಸಂಪುಟ ಸಹೋದ್ಯೋಗಿಗಳಾಗಲಿ, ಯಾರ ಕೆಲಸಕ್ಕೂ ಅಡ್ಡಿಯಾದವರಲ್ಲ. ಎಲ್ಲರಲ್ಲೂ, ಎಲ್ಲರ ಸಾಮಥ್ರ್ಯದಲ್ಲಿ ಅವರಿಗೆ ವಿಶ್ವಾಸ. ಅದರಿಂದಾಗಿಯೇ ಪ್ರತಿಯೊಬ್ಬರ ಸಾಮಥ್ರ್ಯ ಹೊರಬರಲು ಸಾಧ್ಯವಾಯಿತು. ಬಹುಶಃ ರಾಜ್ಯ ಬಿಡಿ, ರಾಷ್ಟ್ರದಲ್ಲೇ ಯಾವ ರಾಜ್ಯದಲ್ಲೂ ಅಲ್ಲಿಯ ಸಂಪುಟ ಸಹೋದ್ಯೋಗಿಗಳಿಗೆ ಇಂತಹ ಮುಖ್ಯಮಂತ್ರಿ ಇದುವರೆಗೆ ಸಿಕ್ಕಿರಲಾರ ಎಂದರು ಚಂದ್ರೇಗೌಡ.
ನಂತರ ಮಾತನಾಡಿದ ಮಾಜಿ ಸಚಿವ ಪಿಜಿಆರ್ ಸಿಂಧ್ಯ, ಪಟೇಲರು ಸತ್ತು 15 ವರ್ಷಗಳಾದರೂ ಅವರ ನೆನಪು, ಕೊಡುಗೆ ಇನ್ನೂ ಜೀವಂತವಾಗಿದೆ. ಇಲ್ಲಿ ನೆರೆದಿರುವ ಜನಸಮೂಹವೇ ಅದಕ್ಕೆ ಸಾಕ್ಷಿ. ಅವರೊಬ್ಬ ಅದ್ಭುತ ಮಾರ್ಗದರ್ಶಕ ಎಂದರು. ರಾಜ್ಯಸರ್ಕಾರದ ಮಾಜಿ ಮುಖ್ಯಕಾರ್ಯದರ್ಶಿಗಳಾದ ಭಟ್ಟಾಚಾರ್ಯ ಹಾಗೂ ಬಿಎಸ್ ಪಾಟೀಲ್ ಪಟೇಲರೊಂದಿಗಿನ ತಮ್ಮ ದೀರ್ಘಕಾಲೀನ ಒಡನಾಟದ ಹಲವಾರು ಪ್ರಸಂಗಗಳನ್ನು ನೆನಪಿಸಿಕೊಂಡರು. ಮಾಹಿತಿ, ಮೂಲ ಸೌಕರ್ಯ ಹಾಗೂ ಹಜ್ ಖಾತೆ ಸಚಿವ ರೋಶನ್ ಬೇಗ್, ಪಟೇಲರು ತಮ್ಮನ್ನು ಗೃಹ ಮಂತ್ರಿಯಾಗಿಸಿ ತೋರಿದ ವಿಶ್ವಾಸವನ್ನು ಸ್ಮರಿಸಿದರು. ಪ್ರೊ. ನರಸಿಂಹಯ್ಯ, ಜೆಎಚ್ ಪಟೇಲರ ಸೋದರ ಎಸ್. ಎಚ್. ಪಟೇಲ್ ಹಾಗೂ ಮಗ ಮಹಿಮಾ ಪಟೇಲ್, ಬಲ್ಕಿಶ್ ಬಾನು, ಶಾಸಕ ಎಂ. ಶ್ರೀನಿವಾಸ್, ಐಎಎಸ್ ಅಧಿಕಾರಿ ಚಿಕ್ಕಮಠ, ಮಾಜಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಶಂಕರ್ ಬಿದರಿ, ಗೋಪಾಲ ಹೊಸೂರು ಇದ್ದರು.
Advertisement