ಕಟ್ಟಡಕ್ಕೆ ಕೈ ಎತ್ತಿದ ಕಾಂಗ್ರೆಸ್ ಸಚಿವರು

ಕಾಂಗ್ರೆಸ್ ಭವನಕ್ಕೆ ಅನುದಾನ ನೀಡುವಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಒಂದು ವರ್ಷದ ಹಿಂದೆ ಬರೆದ ಪತ್ರಕ್ಕೆ ಸಚಿವರು ಮತ್ತು ಶಾಸಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾಂಗ್ರೆಸ್(ಕಚೇರಿ)
ಕಾಂಗ್ರೆಸ್(ಕಚೇರಿ)

ಬೆಂಗಳೂರು: ಕಾಂಗ್ರೆಸ್ ಭವನಕ್ಕೆ ಅನುದಾನ ನೀಡುವಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಒಂದು ವರ್ಷದ ಹಿಂದೆ ಬರೆದ ಪತ್ರಕ್ಕೆ ಸಚಿವರು ಮತ್ತು ಶಾಸಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದಷ್ಟೇ ನಡೆದ ಕೆಪಿಸಿಸಿ ಬಿಲ್ಡಿಂಗ್ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಈಗಿರುವ ಕೆಪಿಸಿಸಿ ಕಚೇರಿ ಹಿಂಭಾಗದ ಜಾಗದಲ್ಲಿ ನಾಲ್ಕು ಅಂತಸ್ತಿನ ಕೆಪಿಸಿಸಿ ಭವನ ನಿರ್ಮಿಸಲಾಗುತ್ತಿದೆ. ಸುಮಾರು 20 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ಕಟ್ಟಡಕ್ಕೆ ಕಾಂಗ್ರೆಸ್ ನ ಎಲ್ಲಾ ಸಂಸದರು, ಶಾಸಕರು, ಸಚಿವರು ಮಾಜಿ ಶಾಸಕ, ಸಂಸದ, ಸಚಿವರು ಆರ್ಥಿಕ ನೆರವು ನೀಡುವಂತೆ ಡಾ.ಜಿ ಪರಮೇಶ್ವರ್ ಅವರು ಪತ್ರ ಬರೆದಿದ್ದರು.
ನೀವೆಲ್ಲರೂ ಈ ಮಟ್ಟಕ್ಕೆ ಬೆಳೆಯಲು ಪಕ್ಷವೇ ಕಾರಣವಾಗಿದೆ. ಕಾಂಗ್ರೆಸ್ ಕಚೇರಿ ಪ್ರತಿಯೊಬ್ಬ ಕಾಂಗ್ರೆಸ್ಸಿಗನಿಗೆ ದೇಗುಲವಿದ್ದಂತೆ. ಹೀಗಾಗಿ ಪಕ್ಷದ ಕಟ್ಟಡ ನಿರ್ಮಾಣಕ್ಕೆ ಉದಾರ ನೆರವು ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದರು. ಸಚಿವರು ಮತ್ತು ಸಂಸದರು ರೂ 5 ಲಕ್ಷ ಹಾಗೂ ಶಾಸಕರು 2 ಲಕ್ಷ ನೆರವು ನೀಡುವಂತೆ ಪ್ರತಿಯೊಬ್ಬರಿಗೂ ಪತ್ರ ಬರೆದು ಮನವಿ ಮಾಡಲಾಗಿತ್ತು.
ಆದರೆ ಈ ಮನವಿಗೆ ಸಚಿವರು ಮತ್ತು ಶಾಸಕರು ನಿರೀಕ್ಷಿತ ಲಕ್ಷ್ಯ ನೀಡಿಲ್ಲ ಮತ್ತು ಅನುದಾನವನ್ನು ನೀಡಿಲ್ಲ. ಇದು ಕೆಪಿಸಿಸಿ ಬಿಲ್ಡಿಂಗ್ ಸಮಿತಿಯಲ್ಲಿ ಆಕ್ರೋಶ ಮೂಡಿಸಿದ್ದು, ಆದಷ್ಟು ಬೇಗ ಧನ ಸಹಾಯ ಮಾಡುವಂತೆ ಸೂಚಿಸಲಾಗಿದೆ. ಈ ವಿದ್ಯಮಾನ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿದ್ದು ಸಂಪುಟದ ಸದಸ್ಯರು ಸೂಚಿತ ಅನುದಾನ ನೀಡದೇ ಇದ್ದರೆ ತಕ್ಷಣ ಕೆಪಿಸಿಸಿ ಕಚೇರಿಗೆ ಕಳುಹಿಸುವಂತೆ ಆದೇಶ ನೀಡಿದ್ದಾರೆ.
ಇದರ ಜತೆಗೆ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಬೇಕೆಂಬ ಮಹತ್ವದ ನಿರ್ಣಯವನ್ನು ಈ ಸಭೆತ್ಯಲ್ಲಿ ತೆಗೆದುಕೊಳ್ಳಲಾಗಿದೆ. ಈ ಸರ್ಕಾರದ ಅವಧಿ ಮುಕ್ತಾಯವಾಗುವುದರೊಳಗಾಗಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸ್ವಂತ ಕಟ್ಟಡ ಕಲ್ಪಿಸಬೇಕು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com