ಮೇಕ್ ಇನ್ ಇಂಡಿಯಾದಿಂದ ಟೋಪಿ: ಹೆಚ್.ಎಸ್ ದೊರೆಸ್ವಾಮಿ

ಮೇಕ್ ಇನ್ ಇಂಡಿಯ ಹೆಸರಿನಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿಗರನ್ನು ದೇಶಕ್ಕೆ ಆಹ್ವಾನಿಸುತ್ತಿರುವುದನ್ನೇ ಕೇಂದ್ರ ಸರ್ಕಾರ ಅಭಿವೃದ್ಧಿ ಎಂದು ಪರಿಗಣಿಸಿದೆ.
ಹೆಚ್.ಎಸ್ ದೊರೆಸ್ವಾಮಿ
ಹೆಚ್.ಎಸ್ ದೊರೆಸ್ವಾಮಿ

ಬೆಂಗಳೂರು: ಮೇಕ್ ಇನ್ ಇಂಡಿಯ ಹೆಸರಿನಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿಗರನ್ನು ದೇಶಕ್ಕೆ ಆಹ್ವಾನಿಸುತ್ತಿರುವುದನ್ನೇ ಕೇಂದ್ರ ಸರ್ಕಾರ ಅಭಿವೃದ್ಧಿ ಎಂದು ಪರಿಗಣಿಸಿದೆ. ಬ್ರಿಟೀಷರ ಕಾಲದಲ್ಲಿ ಇದೇ ರೀತಿಯಲ್ಲಿ ವಿದೇಶಿಗರು ನಮ್ಮ ಸಂಪನ್ಮೂಲ ಬಳಕೆ ಮಾಡಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿ ಹೆಚ್ಚಿನ ಹಣ ದೋಚಿದರು ಎಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಾ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಎ.ಆರ್ ನಾರಾಯಣ ಘಟ್ಟ ಮತ್ತು ಸರೋಜಮ್ಮ ಅವರು ಸ್ತಾಪಿಸಿರುವ ಗಾಂಧಿ ಪುದುಮಟ್ಟು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮತ್ತೆ ವಿದೇಶಿಗರಿಗೆ ಬಂಡವಾಳ ಹೂಡಿಕೆಗೆ ಅವಕಾಶ ಕೊಟ್ಟರೆ ಲಾಭ ಮಾಡಿಕೊಳ್ಳಲು ನಾವೇ ರತ್ನಕಂಬಳಿ ಹಾಕಿದಂತಾಗುತ್ತದೆ. ಈ ಮೂಲಕ ಕೆಂದ್ರ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಪರೋಕ್ಷವಾಗಿ ಜನರ ಮೇಲಿನ ಸಾಲದ ಹೊರೆಯನ್ನು ಹೆಚ್ಚು ಮಾಡುತ್ತಿದೆ ಎಂದು ಆರೋಪಿಸಿದರು.
ಯಾವುದೇ ಯೋಜನೆಗಳು ಜಾರಿಗೆ ತಂದರೂ ಅದು ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ಅನುಕೂಲವಾಗುವಂತಿರಬೇಕು ಎಂಬುದು ಗಾಂಧೀಜಿಯ ಕನಸಾಗಿತ್ತು. ಆದರೆ ಇಂದು ಅಂತಹ ಯಾವುದೇ ಯೋಜನೆಗಳು ಕಾಣುತ್ತಿಲ್ಲ. ವಿಶ್ವಶಾಂತಿಯ ಕನಸು ನೆನೆಗುದಿಗೆ ಬಿದ್ದಿದೆ. ಲೋಕಾಯುಕ್ತದಲ್ಲಿ ಕೇವಲ ಭ್ರಷ್ಟ ಅಧಿಕಾರಿಗಳೇ ತುಂಬಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಹಿತಿ ಡಾ.ಕೆ ಮರುಳಸಿದ್ದಪ್ಪ ಮಾತನಾಡಿ, ಗಾಂಧೀಜಿಯ ಅಂದಿನ ಕನಸುಗಳು ಇಂದಿಗೂ ಪ್ರಸ್ತುತವಾಗಿವೆ. ಬಹುಸಂಖ್ಯಾತರೇ ತುಂಬಿರುವ ಈ ಸಮಾಜದಲ್ಲಿ ಅಲ್ಪಸಂಖ್ಯಾತರ ಬದುಕಿಗೆ ಬೆಲೆಯೇ ಇಲ್ಲದಂತಾಗಿದೆ. ಅಸ್ಪೃಶ್ಯರು ಇಂದಿಗೂ ಹೋರಾಟದಿಂದಲೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com