
ಬೆಂಗಳೂರು: ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಆದ ಗತಿಯೇ ನಿನಗೂ ಆಗುತ್ತದೆ ಎಂದು ರಾಘವೇಶ್ವರ ಭಾರತೀ ಸ್ವಾಮಿ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ನಾವು ಬದುಕುವುದೇ ಕಷ್ಟವಾಗಿದೆ ಎಂದು ರಾಮಕಥಾ ಗಾಯಕಿ ಪ್ರೇಮಲತಾ ಮತ್ತೆ ಸರ್ಕಾರಕ್ಕೆ ದೂರು ನೀಡಿದ್ದಾರೆ.
ಸರ್ಕಾರ ನೇಮಿಸಿರುವ ಅತ್ಯಾಚಾರ ತಡೆ ಸಮಿತಿಗೆ ಮಂಗಳವಾರ ದೂರು ಸಲ್ಲಿಸಿರುವ ಅವರು, ರಾಘವೇಶ್ವರ ಸ್ವಾಮಿಯಿಂದ ನಿರಂತರ ಬೆದರಿಕೆ ಕರೆ ಬರುತ್ತಿದ್ದು, ಅವರು ತಮ್ಮ ಭಕ್ತ ಬಂಟರನ್ನು ಮುಂದಿಟ್ಟುಕೊಂಡು ಭಯೋತ್ಪಾದನೆ ಚಟುವಟಿಕೆ ನಡೆಸುತಿದ್ದಾರೆ ಎಂದು ಸಮಿತಿ ಅಧ್ಯಕ್ಷ ವಿ. ಎಸ್.ಉಗ್ರಪ್ಪ ಅವರ ಬಳಿ ನೋವು ತೋಡಿಕೊಂಡಿದ್ದಾರೆ.
ತಾಲಿಬಾನ್ ಉಗ್ರರು ಭಾಷಣದ ಸಿಡಿಗಳನ್ನು ಬಿಡುಗಡೆ ಮಾಡಿ ಜನರಲ್ಲಿ ಭಯೋತ್ಪಾದನೆ ಮಾಡಿದಂತೆ ಮಾಡುತ್ತಿದ್ದಾರೆ. ಭಾಷಣದ ಸಿಡಿಗಳನ್ನು ಅಲ್ಲಲ್ಲಿ ಪ್ರಚಾರ ಮಾಡುವಂತೆ ಭಕ್ತರಿಗೆ ಹೇಳುತ್ತಿದ್ದಾರೆ. ತಮ್ಮ ವಿರುದ್ಧ ದೂರು ನೀಡಿರುವವರ ವಿರುದ್ಧ ಸುಮ್ಮನೆ ಕುಳಿತುಕೊಳ್ಳಬೇಡಿ ಎಂದು ಪ್ರಚೋದನೆ ಮಾಡುತ್ತಿದ್ದಾರೆ. ಈ ಮೂಲಕ ಊರಿನಲ್ಲಿರುವ ನಮ್ಮ ಅಣ್ಣ ಮತ್ತು ಕುಟುಂಬದವರು ಬೆದರುವಂತೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ. ಇವರ ಬೆದರಿಕೆಯಿಂದ ಊರಿನಲ್ಲಿ ಯಾರೂ ಬದುಕದಂತಾಗಿದೆ. ಸ್ವಾಮೀಜಿಯನ್ನು ವಿರೋಧಿಸಿ ದೂರು ನೀಡುವುದಕ್ಕೆ ಹೆದರುವಂತಾಗಿದೆ ಎಂದು ಪ್ರೇಮಲತಾ ಆಪಾದಿಸಿದ್ದಾರೆ.
ತಮಗೆ ಜೀವ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬನಶಂಕರಿ ಪೊಲೀಸ್ ಠಾಣೆಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದ್ದೇನೆ. ಆದರೆ ಅವರು ಬರೀ ದೂರು ಸ್ವೀಕರಿಸುತ್ತಾರೆಯೇ ವಿನಃ ಈತನಕ ಎಫ್ಐಆರ್ ದಾಖಲಿಸಿಲ್ಲ. ಸ್ವಾಮೀಜಿ ವಿರುದ್ಧ ಎಲ್ಲೇ ಕೇಸು ದಾಖಲಿಸಿದರೂ ಅದನ್ನು ಸ್ವೀಕರಿಸುವುದಿಲ್ಲ. ಎಫ್ ಐಆರ್ ಹಾಕುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ದೂರಿನಲ್ಲಿ ಸ್ವಾಮಿಜಿ ಹೆಸರು ತೆಗೆದರೆ ಮಾತ್ರ ದೂರು ದಾಖಲಿಸಿಕೊಳ್ಳುತ್ತೇವೆ. ಎಫ್ಐಆರ್ ಹಾಕುತ್ತೇವೆ ಎನ್ನುತ್ತಿದ್ದಾರೆ.ಇಂಥ ಪರಿಸ್ಥಿತಿಯಲ್ಲಿ ನಮಗೆ ಸರ್ಕಾರಿ ವಕೀಲರಿಂದಲೂ ನಿರೀಕ್ಷಿತ ರೀತಿಯಲ್ಲಿ ಸಹಾಯವಾಗುತ್ತಿಲ್ಲ. ಆದ್ದರಿಂದ ಮುಂದೆಯಾದರೂ ನ್ಯಾಯ ಸಿಗುವಂತೆ ಕ್ರಮಕೈಗೊಳ್ಳಬೇಕು ಎಂದು ಅವರು ಸಮಿತಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರೇಮಲತಾ ಪತಿ ದಿವಾಕರ ಶಾಸ್ತ್ರಿ ಹಾಜರಿದ್ದರು.
--
ಸನ್ಯಾಸಿಯೊಬ್ಬರು ಈ ರೀತಿ ಭಯೋತ್ಪಾದನೆ ಮಾಡಿರುವ ಬಗ್ಗೆ ಎಲ್ಲಿಯೂ ನೋಡಿಲ್ಲ. ಕೇಳಿಲ್ಲ. ಈ ಬಗ್ಗೆ ಕೂಡಲೇ ತನಿಖೆ ನಡೆಸುವಂತೆ ಸೂಚಿಸುತ್ತೇನೆ. ಹೇಮಲತಾ ಅವರ ದೂರುಗಳನ್ವಯ ಎಫ್ಐಆರ್ ದಾಖಲಿಸದ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳುತ್ತೇನೆ.
ವಿ.ಎಸ್.ಉಗ್ರಪ್ಪ, ಅತ್ಯಾಚಾರ ತಡೆ ಸಮಿತಿ ಅಧ್ಯಕ್ಷ
Advertisement