
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅಗೆದಷ್ಟೂ ಅಕ್ರಮಗಳು ಪತ್ತೆಯಾಗುತ್ತಿದ್ದು, ಬುಧವಾರ ಮತ್ತೆ 101 ಅಕ್ರಮ ಖಾತೆಗಳ 600 ಕೋಟಿ ರೂಪಾಯಿ ಹಗರಣ ಬೆಳಕಿಗೆ ಬಂದಿದೆ. ಇದರಿಂದ ಅಚ್ಚರಿಗೊಂಡಿರುವ ಸರ್ಕಾರ ಹಗರಣವನ್ನು ಇನ್ನೂ ಆಳವಾಗಿ ತನಿಖೆ ಮಾಡಲು ನಿರ್ಧರಿಸಿದೆ.
ಸದ್ಯದ ಮಾಹಿತಿ ಪ್ರಕಾರ ಈವರೆಗೂ ಸಿಕ್ಕಿರುವ ಅಕ್ರಮ ಖಾತೆ ಮತ್ತು ಹಣ ದುರ್ಬಳಕೆಯಾಗಿರುವ ಈ ಹಗರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸರ್ಕಾರ ಚಿಂತನೆ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ಗುರುವಾರದ ವೇಳೆಗೆ ಹಗರಣವನ್ನು ಸಿಐಡಿಗೆ ವಹಿಸುವ ಅಧಿಕೃತ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಸಿಐಡಿ ತನಿಖೆ ಆರಂಭವಾಗುತ್ತಿದ್ದಂತೆ ಇಲಾಖೆಯ 6 ಹಿರಿಯ ಅಧಿಕಾರಿಗಳಿಗೆ ತಲೆದಂಡವಾಗುವ ಸಂಭವವೂ ಇದೆ ಎಂದು ಮೂಲಗಳು ತಿಳಿಸಿವೆ.
ಏನಿದು ಅಕ್ರಮಗಳ ಜಾಲ?:
ಇಲಾಖೆ ಯಲ್ಲಿ ವಿವಿಧ ಯೋಜನೆಗಳಿಗಾಗಿ ನೀಡಲಾಗಿದ್ದ 4,000 ಕೋಟಿ ವೆಚ್ಚವಾಗದೆ, ದಾಖಲೆಗಳು ಕಾಣದೆ ಲೆಕ್ಕಕ್ಕೂ ಸಿಗದಿರುವ ದೊಡ್ಡ ಅಕ್ರಮ ಪತ್ತೆಯಾಗಿತ್ತು.ಒಂದು ಯೋಜನೆಗೆ ಒಂದೇ ಬ್ಯಾಂಕ್ ಖಾತೆ ತೆರೆಯಬೇಕೆಂದು ನಿಯವಿದ್ದರೂ,ಪ್ರತಿ ಯೋಜನೆಗೆ 30ರಿಂದ 100 ಖಾತೆಗಳವರೆಗೂ ತೆರೆಯಲಾಗಿತ್ತು.ಒಟ್ಟಾರೆ ಎಲ್ಲಾ ಬ್ಯಾಂಕ್‍ಗಳಿಂದ 1,123 ಖಾತೆಗಳನ್ನು ತೆರೆದು ಯೋಜನೆಗಳ ಅನುದಾನದ ಹಣವನ್ನು ತಮ್ಮ ಸ್ವಂತ ಖಾತೆಗೂ ವರ್ಗಾಯಿಸಿಕೊಳ್ಳಲಾಗಿತ್ತು.ಇಲಾಖೆಯಲ್ಲಿನ ಅಕ್ರಮಗಳ ತನಿಖಾ ಸಮಿತಿ ಇದನ್ನು ಪತ್ತೆ ಮಾಡಿದ್ದು, ಮುಂದಿನ ಹೆಚ್ಚುವರಿ ತನಿಖೆಯನ್ನು ರಾಜ್ಯ ಲೆಕ್ಕಪರಿಶೋಧನಾ ಇಲಾಖೆಗೆ ವಹಿಸಲಾಗಿತ್ತು. ಆದರೆ, ಈಗ ಮತ್ತೆ 101 ಅಕ್ರಮ ಖಾತೆಗಳು ಪತ್ತೆಯಾಗಿದ್ದು,ಇದರಲ್ಲಿ ಸುಮಾರು 600 ಕೋಟಿಗಳನ್ನು ಅಕ್ರಮವಾಗಿ ಯೋಜನೆಯ ಹಣವನ್ನು ಠೇವಣಿ ಇಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲು ಈ 101 ಅಕ್ರಮ ಖಾತೆಗಳನ್ನು ತೆರೆಯಲಾಗಿದ್ದು, ಎಲ್ಲಾ ಖಾತೆಗಳನ್ನು ಬೆಂಗಳೂರು ಜಲಮಂಡಳಿಯ ಸಿಂಡಿಕೇಟ್ ಬ್ಯಾಂಕ್‍ನಲ್ಲೇ ತೆರೆಯಲಾಗಿದೆ. ಇದರಲ್ಲಿ ಮೇಲ್ನೋಟಕ್ಕೆ ಮೂರ್ನಾಲ್ಕು ಖಾತೆಗಳು ಮಾತ್ರ ಅಧಿಕೃತವಾಗಿರುವಂತೆ ಕಾಣುತ್ತಿವೆ ಎಂದು ಅವರು ವಿವರಿಸಿದರು.
ಲಭ್ಯ ಮಾಹಿತಿ ಪ್ರಕಾರ 600 ಕೋಟಿ ಅನುದಾನ 2010-11ರ ಅವಧಿಗೆ ಕುಡಿಯುವ ನೀರಿಗಾಗಿ ನೀಡಿದ್ದಾಗಿದೆ.ಆದರೆ ಅಧಿಕಾರಿಗಳನ್ನು ಇದನ್ನು ಯೋಜನೆಗೆ ಬಳಸಿದೆ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಹಿಂದೆ ಇಲಾಖೆಯಲ್ಲಿ ಆಗಿರುವ ಅಕ್ರಮಗಳ ತನಿಖೆಗೆ ನೇಮಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಪುನಟಿ ಶ್ರೀಧರ್ ನೇತೃತ್ವದಲ್ಲಿ ಸಮಿತಿಗೂ ಮಾಹಿತಿ ನೀಡದೆ ಅಧಿಕಾರಿಗಳು ವಂಚಿಸಿದ್ದರು.ಅದನ್ನು ಈಗ ಪತ್ತೆ ಮಾಡಲಾಗಿದೆ ಎಂದು ಪಾಟೀಲ್ ತಿಳಿಸಿದರು.
Advertisement