ಮ್ಯಾಗಿಯಲ್ಲಿ ಸೀಸವಿಲ್ಲ

ನಿಷೇಧಿತ ಮ್ಯಾಗಿ ನೂಡಲ್ಸ್ ರಾಜ್ಯದಲ್ಲಿ ಮತ್ತೆ ಮಾರುಕಟ್ಟೆಗೆ ಬರಲಿದೆ.ಈ ವಿಚಾರದಲ್ಲಿ ರಾಜ್ಯ ಸರ್ಕಾರಆಸಕ್ತಿ ತೋರಿಸಿದ್ದು, ಸದ್ಯದಲ್ಲೇ ನೆಸ್ಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿಷೇಧಿತ ಮ್ಯಾಗಿ ನೂಡಲ್ಸ್ ರಾಜ್ಯದಲ್ಲಿ ಮತ್ತೆ ಮಾರುಕಟ್ಟೆಗೆ ಬರಲಿದೆ.ಈ ವಿಚಾರದಲ್ಲಿ ರಾಜ್ಯ ಸರ್ಕಾರ ಆಸಕ್ತಿ ತೋರಿಸಿದ್ದು, ಸದ್ಯದಲ್ಲೇ ನೆಸ್ಲೆ ಕಂಪನಿಯ ಮ್ಯಾಗಿ ಮತ್ತೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

ಆರೋಗ್ಯ ಕವಚ ಯೋಜನೆಯ ಕಾರ್ಯಕ್ರಮದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಆರೋಗ್ಯ ಸಚಿವ ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಮ್ಯಾಗಿ ಮೇಲಿನ ನಿಷೇಧ ತೆರವುಗೊಳಿಸಲು ಚಿಂತಿಸಲಾಗುತ್ತಿದೆ ಎಂದರು.

ಮ್ಯಾಗಿ ನೂಡಲ್ಸ್ ನಲ್ಲಿ ಅಪಾಯಕಾರಿ ಮೋನೋ ಸೋಡಿಯಂ ಗ್ಲುಟಾಮ್ಯಾಟ್ ಮತ್ತು ಸೀಸದ ಪ್ರಮಾಣ ಹೆಚ್ಚಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮ್ಯಾಗಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿತ್ತು. ಆದರೆ, ಈ ತನಕ ನಡೆಸಿದ ಪರೀಕ್ಷೆಗಳಿಂದ ಮ್ಯಾಗಿಯಲ್ಲಿ ಆ ಅಂಶಗಳು ಅಪಾಯಕಾರಿ ಪ್ರಮಾಣ ದಲ್ಲಿ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮ್ಯಾಗಿ ಮೇಲಿದ್ದ ನಿಷೇಧವನ್ನು ತೆರವುಗೊಳಿಸಲು ಚಿಂತಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ಸರ್ಕಾರಿ ಪ್ರಯೋಗಾಲಯಗಳಲ್ಲದೆ, ಖಾಸಗಿ ಪ್ರಯೋಗಾಲಯಗಳಲ್ಲೂ ಮ್ಯಾಗಿಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಮೋನೋ ಸೋಡಿಯಂ ಗ್ಲುಟೋಮ್ಯಾಟ್ ಮತ್ತು ಸೀಸದ ಪ್ರಮಾಣ ಹಾನಿಕಾರಕ ಮಟ್ಟದಲ್ಲಿ ಇರುವ ಬಗ್ಗೆ ತಿಳಿದು ಬಂದಿಲ್ಲ. ಅಷ್ಟಕ್ಕೂ ಮ್ಯಾಗಿಯಲ್ಲಿ ಯಾವ ರಾಸಾಯನಿಕ ಎಷ್ಟಿರಬೇಕೆನ್ನುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಮಾನದಂಡ ನಿಗದಿಪಡಿಸಿಲ್ಲ. ಅಂದ ಮೇಲೆ ಈಗ ಇರುವ ಮೋನೋ ಸೋಡಿಯಂ ಗ್ಲುಟಾಮ್ಯಾಟ್ ಮತ್ತು ಸೀಸದಿಂದ ಅಪಾಯವಾಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೂ ಕೋಲ್ಕತ್ತಾದಲ್ಲಿ ಮ್ಯಾಗಿಯಲ್ಲಿರುವ ರಾಸಾಯನಿಕಗಳ ಪ್ರಮಾಣದ ಬಗ್ಗೆ ಆಕ್ಷೇಪ ಇರುವುದರಿಂದ ರಾಜ್ಯದಲ್ಲೂ ನಿಷೇಧ ಹೇರಲಾಗಿತ್ತು ಎಂದು ಖಾದರ್ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಮ್ಯಾಗಿ ಮೇಲಿನ ನಿಷೇಧ ತೆರವುಗೊಳಿಸುವ ಚಿಂತನೆ ಮಧ್ಯೆಯೂ ಮತ್ತೆ ಮ್ಯಾಗಿ ಮಾದರಿಗಳನ್ನು ಹೊರ ರಾಜ್ಯದ ಖಾಸಗಿ ಲ್ಯಾಬ್‍ಗಳಿಗೆ ಕಳುಹಿಸಿ ಮತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು. ಏಕೆಂದರೆ, ಕೋಲ್ಕತ್ತಾದಲ್ಲಿ ಮೋನೋ ಸೋಡಿಯಂ ಗ್ಲುಟೋಮ್ಯಾಟ್ ಅಂಶ ಶೇ.1ರಷ್ಟು ಹೆಚ್ಚಾಗಿದೆ ಎನ್ನುವುದು ಹೇಳಲಾಗಿತ್ತು. ಅದೂ ಉತ್ಪಾದನೆಯಾದ 6 ತಿಂಗಳ ನಂತರ ಈ ಬಗ್ಗೆ ಆಕ್ಷೇಪ ಎತ್ತಲಾಗಿತ್ತು. ಹಾಗೆಯೇ ರಾಜ್ಯದಲ್ಲಿ ಯಾವುದೇ ಹಾನಿಕಾರ ಅಂಶ ಇರುವ ಬಗ್ಗೆ ಮಾಹಿತಿ ಇಲ್ಲದ ಕಾರಣ ನಿಷೇಧ ತೆರವುಗೊಳಿಸುವ ಚಿಂತನೆ ಅಗತ್ಯ ಎನಿಸುತ್ತಿದೆ ಎಂದು ಖಾದರ್ ವಿವರಿಸಿದರು.

ಗ್ರಾಮೀಣ ಸೇವೆ ತಡೆಯಾಜ್ಞೆ ತೆರವಿಗೆ ಕ್ರಮ
ವೈದ್ಯ ವಿದ್ಯಾರ್ಥಿಗಳ ಗ್ರಾಮೀಣ ಸೇವೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಖಾದರ್, ತಡೆಯಾಜ್ಞೆ ತೆರವಿಗೆ ಸದ್ಯದಲ್ಲೇ ಕ್ರ ಮ ಕೈಗೊಳ್ಳಲಾಗುವುದು ಎಂದರು. ಪದವಿ ಮುಗಿಸಿದ ವೈದ್ಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕೆಲವು ಡೀಮ್ಡ್ ಮತ್ತು ನೆರೆ ರಾಜ್ಯದ ಕೇಂದ್ರೀಯ ಸಂಸ್ಥೆಗಳು ಕೋರ್ಟ್ ಮೊರೆ ಹೋಗಿದ್ದವು. ಅದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 15 ದಿನಗಳ ಷರತ್ತಿನ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ನಾವು ಕೋರ್ಟ್‍ಗೆ ಸರಿಯಾಗಿ ಮನವರಿಕೆ ಮಾಡಿಕೊಡುತ್ತೇವೆ. ತಡೆಯಾಜ್ಞೆ ತೆರವಾಗುವಂತೆ ಮಾಡುತ್ತೇವೆ ಎಂದು ಖಾದರ್ ವಿವರಣೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com