ಬೆಂಗಳೂರು: ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ಅಂಬರೀಶ್ ಅವರು ಅರ್ಹ ವ್ಯಕ್ತಿ ಎಂದು ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರ ಗೈರು ಹಾಜರಿಯಿಂದ ಅವರಲ್ಲಿ ಶಿಸ್ತಿನ ಕೊರತೆಯಿದೆ ಎನ್ನುವುದು ಎದ್ದು ತೋರುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ ಅಸಮಾಧಾನ ವ್ಯಕ್ತಪಡಿಸಿದರು. ಶುಕ್ರವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ.ವಿಷ್ಣು ಸೇನಾ ಸಮಿತಿ ಹಾಗೂ ಕಸಾಪ ಜಂಟಿಯಾಗಿ ಆಯೋಜಿಸಿದ್ದ ಅಭಿನವ ಭಾರ್ಗವ ಡಾ.ವಿಷ್ಣು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಾ.ವಿಷ್ಣುವರ್ಧನ್ ಅವರು ಅಂಬರೀಶ್ ಅವರ ಆಪ್ತ ಮಿತ್ರರು, ಅವರನ್ನು ಅರಿತವರು ಎಷ್ಟೇ ಕಾರ್ಯಗಳಿದ್ದರೂ ಅವರು ಬರುತ್ತಾರೆ ಎಂದು ತಿಳಿದಿದ್ದೆವು. ಆದರೆ ಅವರು ಈ ಕಾರ್ಯಕ್ರಮವನ್ನು ಸಣ್ಣ ಕಾರ್ಯಕ್ರಮವೆಂದು ತಿಳಿದಿರಬಹುದು. ಅವರ ಈ ನಡೆಯಿಂದ ಪರಿಷತ್ತಿಗೆ ಬೇಸರವಾಗಿದೆ ಎಂದರು. ವಸತಿ ಸಚಿವ ಡಾ.ಎಂ.ಎಚ್.ಅಂಬರೀಶ್ ಹೆಸರಿನಲ್ಲಿ ದತ್ತಿ ಸ್ಥಾಪಿಸಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಬೇಕು. ಈ ನಿಟ್ಟಿನಲ್ಲಿ ಅಂಬಿ ಅವರು ರು. 5 ಲಕ್ಷ ನೀಡಬೇಕೆಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಒತ್ತಾಯಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೂರಾರು ದತ್ತಿಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಒಂದು ಗಿಣಿಯ ಹೆಸರಿನಲ್ಲೂ ಹಾಗೂ ಕಸಾಪ ಮುಖ್ಯ ಕಚೇರಿಯಲ್ಲಿರುವ ಭಾವಚಿತ್ರಗಳಿಗೆ ಹಾರ ಹಾಕಲು ದತ್ತಿ ಸ್ಥಾಪಿಸಲಾಗಿದೆ. ಡಾ.ಅಂಬರೀಶ್ ಅವರ ಹೆಸರಿನಲ್ಲಿ ದತ್ತಿ ಸ್ಥಾಪಿಸಲೇಬೇಕು ಎಂದರು. ಅಂಬರೀಷ್ ಪತ್ನಿ ಹಾಗೂ ನಟಿ ಸುಮಲತಾ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಸ್ನೇಹಕ್ಕೆ ಮತ್ತೊಂದು ಹೆಸರು ವಿಷ್ಣು ಮತ್ತು ಅಂಬರೀಶ್ ಎಂದು ಹೇಳಿದರು. ಇವರ ಬಗ್ಗೆ ಹೇಳಲು ಸಾಧ್ಯವಿಲ್ಲ.ಅದೇ ರೀತಿ, ಅಂಬಿ ದತ್ತಿ ಸ್ಥಾಪಿಸುವ ವಿಚಾರ ಅಂಬರೀಶ್‍ಗೆ ಬಿಟ್ಟಿದ್ದು ಎಂದರು.