
ಬೆಂಗಳೂರು: ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಶುಕ್ರವಾರ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ, ನಿರೀಕ್ಷಣಾ ಜಾಮೀನಿನ ಷರತ್ತುಗಳ ನ್ನು ಪೂರೈಸಿದರು.
ಖುದ್ದು ಹಾಜರಾಗುವಂತೆ ಗುರುವಾರ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಸ್ವಾಮೀಜಿ ಶುಕ್ರವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾದರು. ಈ ವೇಳೆ 2 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಭದ್ರತಾ ಶ್ಯೂರಿಟಿಯನ್ನು ಒದಗಿಸಿದರು. ಸ್ವಾಮೀಜಿ ಒದಗಿಸಿದ ದಾಖಲೆಗಳನ್ನು ನ್ಯಾಯಾಲಯ ಪರಿಶೀಲನೆ ನಡೆಸಿತು.
ಪ್ರೇಮಲತಾ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಸಲ್ಲಿಸಿರುವ ಚಾರ್ಜ್‍ಶೀಟ್ ಪ್ರತಿ ಲಭ್ಯವಾಗಿದೆಯಾ ಎಂದು ನ್ಯಾಯಾಲಯ ಸ್ವಾಮೀಜಿಯವರ ನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ ಲಭ್ಯವಾಗಿದೆ ಎಂದರು.
ವಿಚಾರಣೆ ವೇಳೆ ಸಿಐಡಿ ಪರ ವಕೀಲರು ಹಾಜರಾಗದಿರುವುದಕ್ಕೆ ಸ್ವಾಮಿಜಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ನ್ಯಾಯಾಲಯವು ಈ ವಿಚಾರಣೆಗೆ ಸಿಐಡಿ ಪರ ವಕೀಲರು ಹಾಜರಾಗಲೇಬೇಕೆಂದ ನಿಯಮವಿಲ್ಲ ಹಾಗೂ ಅವರು ಬರುವವರೆಗೆ ಕಾಯುವ ಅಗತ್ಯ ಇಲ್ಲ ಎಂದು ಹೇಳಿ ಜಾಮೀನಿನ ಷರತ್ತುಗಳನ್ನು ಪೂರ್ಣಗೊಳಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ನಿಯಮಾನುಸಾರ ಸೆಷೆನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿತು.
ಶುಕ್ರವಾರ ಬೆಳಗ್ಗೆಯೇ ಸ್ವಾಮೀಜಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು.ಆದರೆ, ಪೂಜಾ ಕಾರ್ಯ ಇರುವ ಕಾರಣ ಮಧ್ಯಾಹ್ನ ಹಾಜರಾಗುವುದಾಗಿ ಸ್ವಾಮಿಜಿ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಮಠದಲ್ಲಿನ ಪೂಜಾ ಕಾರ್ಯಕ್ರಮಗಳನ್ನು ನೇರವೇರಿಸಿದ ಬಳಿಕ ಸ್ವಾಮಿಜಿ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾದರು.
ಸ್ವಾಮೀಜಿಯವರು ತನಿಖೆಗೆ ಸಹಕರಿಸುವುದಾಗಿ ಹೇಳಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗದೆ ನಿರೀಕ್ಷಣಾ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಮುಂದಿನ ವಿಚಾರಣೆ ಅ.16ಕ್ಕೆ ನ್ಯಾಯಾಲಯ ಕಾಯ್ದಿರಿಸಿದೆ.
Advertisement