ಸಿದ್ಧಾಂತ ಬಿಟ್ಟು, ಅಭಿವೃದ್ಧಿ ಮಾಡಿ: ಸೀತಾರಾಂ ಯಚೂರಿ

ಕೇಂದ್ರ ಸರ್ಕಾರ ತನ್ನ ಸಿದ್ಧಾಂತಗಳನ್ನು ಜನರ ಮೇಲೆ ಹೇರುವ ಬದಲು ದೇಶವನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಬಹುದು ಎಂಬುದರ ಕಡೆ ಗಮನ ಹರಿಸುವುದು ಸೂಕ್ತ ಎಂದು ರಾಜ್ಯಸಭಾ ಸದಸ್ಯ ಸೀತಾರಾಂ ಯಚೂರಿ ಅಭಿಪ್ರಾಯಪಟ್ಟರು...
ರಾಜ್ಯಸಭಾ ಸದಸ್ಯ ಸೀತಾರಾಂ ಯಚೂರಿ (ಸಂಗ್ರಹ ಚಿತ್ರ)
ರಾಜ್ಯಸಭಾ ಸದಸ್ಯ ಸೀತಾರಾಂ ಯಚೂರಿ (ಸಂಗ್ರಹ ಚಿತ್ರ)

ಬೆಂಗಳೂರು: ಕೇಂದ್ರ ಸರ್ಕಾರ ತನ್ನ ಸಿದ್ಧಾಂತಗಳನ್ನು ಜನರ ಮೇಲೆ ಹೇರುವ ಬದಲು ದೇಶವನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಬಹುದು ಎಂಬುದರ ಕಡೆ ಗಮನ ಹರಿಸುವುದು ಸೂಕ್ತ ಎಂದು ರಾಜ್ಯಸಭಾ ಸದಸ್ಯ ಸೀತಾರಾಂ ಯಚೂರಿ ಅಭಿಪ್ರಾಯಪಟ್ಟರು.

ಗ್ರಾಮಭಾರತ ಸಾಂಸ್ಕೃತಿಕ ವೇದಿಕೆ ಶನಿವಾರ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ `ಭೋಗ ಭಾರತ/ ಸುಖೀ ಭಾರತ' ಹಾಗೂ `ಗಾಂಧಿ: ನಾಲಿಗೆಯನ್ನು ನಂಬಿದ ನಾಯಕ' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಗೋ ಮಾಂಸ ಭಕ್ಷಣೆ ಮಾಡುತ್ತಾರೆ ಎಂಬ ಕಾರಣಕ್ಕೆ ಜನರ ಮೇಲೆ ಹತ್ಯೆ ನಡೆಯುತ್ತಿದೆ. ನಿರ್ದಿಷ್ಟ ಆಹಾರ ಪದಾರ್ಥ ಸೇವಿಸಬೇಕೆಂದು ಒತ್ತಡ ಏಕೆ ಹಾಕಬೇಕು. ನ್ಯಾಯಪರವಾಗಿ ಹೆಚ್ಚಿಗೆ ಮಾತನಾಡಿ ದವರು ಕೊಲೆ ಮಾಡಲಾಗುತ್ತದೆ. ನಾವು ಎಂತಹ ಭಾರತದಲ್ಲಿ ಬದುಕುತ್ತಿದ್ದೇವೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.

ಪುರಾಣಗಳಲ್ಲಿ ಗೋಮಾಂಸ ಸೇವನೆ ಮಾಡಬಾರದು ಎಂಬುದಕ್ಕೆ ಯಾವುದೇ ಸಾಕ್ಷಿ ದೊರೆಯುವುದಿಲ್ಲ. ರಾಷ್ಟ್ರೀಯತೆ- ಹಿಂದೂ ರಾಷ್ಟ್ರೀಯತೆ, ಇತಿಹಾಸ- ಹಿಂದೂಗಳ ಪುರಾಣ,
ತತ್ವಶಾಸ್ತ್ರ- ಹಿಂದೂ ಥಿಯೋಸೋಫಿಕಲ್ ಆಗಿ ಮಾರ್ಪಾಡುಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಲು ಹೇಗೆ ಸಾಧ್ಯ? ಇತಿಹಾಸದ ಮರುಸೃಷ್ಟಿ ಮಾಡಲಾಗುತ್ತಿದೆ. ಪಠ್ಯಪುಸ್ತಕ, ಸಂಶೋಧನಾ ಗ್ರಂಥಗಳಲ್ಲಿ ತಪ್ಪು ಮಾಹಿತಿ ಸೇರ್ಪಡೆಯಾಗುತ್ತಿರುವುದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ದಿನಕ್ಕೆ 6 ಜೊತೆ ಬಟ್ಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನರಿಗೆ ತಪ್ಪು ಅಂಕಿ ಅಂಶಗಳನ್ನು ನೀಡುವುದರ ಮೂಲಕ ಬಡ ಜನರ ಸಂಖ್ಯೆ ಕಡಿಮೆಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹೆಗಾರ ಮತ್ತು ಆರ್‍ಬಿಐ ಗವರ್ನರ್ ಕೂಡ ಅಂಕಿಅಂಶಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಮೋದಿ ಅವರು ವಿದೇಶಕ್ಕೆ ಹೋಗಿ ಪ್ರವಾಸ ಮಾಡುತ್ತಾ ಅಲ್ಲೇ ಜನರ ಮೆಚ್ಚಿಸಲು ದಿನ ಒಂದಕ್ಕೆ 6ಕ್ಕೂ ವಿವಿಧ ಬಗೆಯ ಧರಿಸು ಧರಿಸುತ್ತಿದ್ದಾರೆ. ಬಹುಶಃ ಚಿತ್ರನಟರು ಕೂಡ ಒಂದು ಹಾಡಿನ ಚಿತ್ರೀಕರಣದಲ್ಲಿ ಇಷ್ಟು ಬಾರಿ ಬಟ್ಟೆ ಬದಲಾಯಿಸುವುದು ಎಂದು ಲೇವಡಿ ಮಾಡಿದರು.

ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂಬ ನೂತನ ಯೋಜನೆ ಮೂಲಕ ವಿದೇಶಿಗರಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಸುಖೀ ಭಾರತದ ಕಡೆ ಗಮನಹರಿಸಬೇಕಾದ ಕೇಂದ್ರ ಸರ್ಕಾರ ಭೋಗದ ಭಾರತ ನಿರ್ಮಾಣದ ಕಡೆ ಹೆಚ್ಚು ಉತ್ಸಾಹಕವಾಗಿದೆ. ಸಿಇಝಡ್ ನೆಪದಲ್ಲಿ ರೈತರ ಭೂಮಿ ಕಬಳಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.

ಸಾಹಿತಿ ರಹಮತ್ ತರೀಕೆರೆ ಮಾತನಾಡಿ, ಭಾರತದಲ್ಲಿ ಕೋಮು ವಿಚಾರಗಳಿಗೆ ಬಲಿಯಾಗುತ್ತಿರುವ ಜೀವಗಳು ಬಹಳ ನೋವು ಉಂಟುಮಾಡಿದೆ. ಆಧುನೀಕರಣದ ಭರಾಟೆಯಲ್ಲಿ ತಂತ್ರಜ್ಞಾನಕ್ಕೆ ಬೆಲೆ ಇದೆಯೇ ಹೊರತು ಮನುಷ್ಯ ಸಂಬಂಧವಲ್ಲ. ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಹತ್ಯೆಗಳು ನಡೆಯುತ್ತಿವೆ. ಇವೆಲ್ಲ ಅಸಹನೆಯ ಸಮಾಜ ಸೃಷ್ಟಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಚಿಂತಕ ಡಾ.ಜಿ. ರಾಮಕೃಷ್ಣ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com