ಸರ್ಕಾರ ಅದ್ಧೂರಿ ದಸರೆ ಕೈಬಿಟ್ಟು, ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಪ್ರಗತಿಪರ ರೈತನಿಂದ ದಸರಾ ಉದ್ಘಾಟಿಸಲಾಗಿದೆ. ವೇದಿಕೆಯ ಹಿನ್ನೆಲೆಯಲ್ಲಿ ಕೂಡ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಅಂಬಾರಿಯ ನಡುವೆ ಹೊಲದಲ್ಲಿ ಉಳುವ ಯೋಗಿ ಅನ್ನದಾತ ಮಿಂಚುತ್ತಿದ್ದ. ಆರಂಭದಲ್ಲಿ ನಾಡಗೀತೆಯ ಜೊತೆ ರೈತ ಗೀತೆ ಕೂಡ ಮೊಳಗಿತು.ನಂತರ ಯಾವುದೇ ಅಳುಕಿಲ್ಲದೇ ಪುಟ್ಟಯ್ಯ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.``ಶಕ್ತಿದೇವತೆ, ಅನ್ನದಾತೆ, ಪ್ರಕೃತಿಮಾತೆಗೆ ನನ್ನ ನಮಸ್ಕಾರ. 400 ವರ್ಷಗಳಿಂದ ದಸರಾ ಆಚರಿಸಿಕೊಂಡು ಬಂದಿರುವ ರಾಜಮನೆತನಕ್ಕೂ ನನ್ನ ನಮಸ್ಕಾರ. ಈ ಬಾರಿ ದಸರಾ ಹಬ್ಬ ಉದ್ಘಾಟನೆಗೆ ಸಾಮಾನ್ಯ ರೈತನಾದ ನನ್ನನ್ನು ಆಯ್ಕೆ ಮಾಡಿದ ಕರ್ನಾಟಕ ಸರ್ಕಾರಕ್ಕೂ ಧನ್ಯವಾದ...'' ಎಂದೇ ಮಾತು ಆರಂಭಿಸಿದ ಪುಟ್ಟಯ್ಯ, ``ರೈತ ಸಮೂಹ ಆತ್ಮಹತ್ಯೆಬಿಡಬೇಕು. ಉತ್ತಮ ಮಳೆಬೆಳೆಯಾಗಬೇಕು ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ. ರೈತರ ಸರಣಿ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿಯವರು ಬದುಕು- ಬೇಸಾಯ ಎಂಬ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಅಲ್ಲಿ ನನ್ನ ಅನುಭವವನ್ನು ಹಂಚಿಕೊಂಡಿದ್ದೆ. ನನಗೆ ಭಾಷಣ ಮಾಡಲು ಬರುವುದಿಲ್ಲ. ಅನುಭವವನ್ನುಹಂಚಿಕೊಳ್ಳುತ್ತೇನೆ'' ಎಂದರು. ``ನಮ್ಮಪ್ಪ ಜೀತಕ್ಕಿದ್ರು. 1967ರಲ್ಲಿ ಸರ್ಕಾರ ನಾಲ್ಕು ಎಕ್ರೆ ದರ್ಖಾಸ್ತು ಭೂಮಿ ಕೊಡ್ತು. ನಾನು ಕೂಡ ತಂದೆಗೆ ಸಾಥ್ ಕೊಡಬೇಕು ಎಂದುಕೊಂಡು ವ್ಯಾಸಂಗ ನಿಲ್ಲಿಸಿ, ಕೃಷಿಗಿಳಿದೆ. ಆಗ ಖುಷ್ಕಿ ಬೆಳೆ, ಜೀವನ ಕಷ್ಟ. 1966, 1976 ರಲ್ಲೂ ಬರ ಬಂದಿತ್ತು.ಆಗ ಏನ್ ಮಾಡ್ಬೇಕು ಅಂತಾ ಗೊತ್ತಾಗಲಿಲ್ಲ. ಈಗ ಆದ್ರೆ ಸರ್ಕಾರ ನೆರವು ನೀಡ್ತದೆ. ನೆಮ್ಮದಿಯ ಜೀವನ ಸಾಗಿಸಬಹ್ದು.